ಬೆಂಗಳೂರು, ಏ.20- ಬಿಸಿಲ ಬೇಗೆಯಿಂದ ಬಸವಳಿದಿದ್ದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವರುಣ ಕೃಪೆ ತೋರಿದ್ದು, ಇಂದು ಬೆಳ್ಳಂಬೆಳಗ್ಗೆ ವಿವಿಧೆಡೆ ಮಳೆಯ ಸಿಂಚನವಾಗಿದೆ.ನಿನ್ನೆ ತುಮಕೂರು, ಮಂಡ್ಯ, ಮಾಗಡಿ, ಮೈಸೂರು, ಚಿಕ್ಕಮಗಳೂರು, ಕೊಡಗು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ ಮತ್ತಿತರ ಕಡೆ ಮಳೆಯಾಗಿದ್ದು, ಇಂದು ಬೆಳಗ್ಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದೆ.
ವಿಜಯನಗರ ಜಿಲ್ಲೆಯಾದ್ಯಂತ ಇಂದು ನಸುಕಿನ ಜಾವ ಮೋಡ ಕವಿದ ವಾತಾವರಣವಿದ್ದು, ಹೊಸಪೇಟೆ ನಗರ, ಹೂವಿನ ಹಡಗಲಿ ಸೇರಿದಂತೆ ವಿವಿಧೆಡೆ ತುಂತುರು ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಎರಡು ತಾಸಿಗೂ ಹೆಚ್ಚು ಕಾಲ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಇನ್ನು ಹುಬ್ಬಳ್ಳಿಯಲ್ಲೂ ಸಹ ಮಳೆಯಾಗಿದ್ದು, ಜನರಿಗೆ ಸಂತಸ ತಂದಿದೆ. ಚಿಕ್ಕಮಗಳೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ, ಗದಗ, ಬೆಳಗಾವಿ, ಧಾರವಾಡದಲ್ಲೂ ಸಹ ಮಳೆಯಾಗಿದೆ. ಬೆಂಗಳೂರಿನಲ್ಲಿ ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆ ಮಳೆಯಾಗುವ ಸಾಧ್ಯತೆ ಇದೆ.
ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ನಾಡಿನ ಜನತೆಗೆ ವರುಣನ ಸಿಂಚನದಿಂದ ತುಸು ತಂಪೆರೆದಂತಾಗಿದೆ.