Friday, October 18, 2024
Homeಬೆಂಗಳೂರುಜಿಟಿಜಿಟಿ ಮಳೆಗೆ ನಾನಾ ಅವಾಂತರ, ರೋಸಿಹೋದ ಬೆಂಗಳೂರಿಗರು

ಜಿಟಿಜಿಟಿ ಮಳೆಗೆ ನಾನಾ ಅವಾಂತರ, ರೋಸಿಹೋದ ಬೆಂಗಳೂರಿಗರು

Bengaluru Rain

ಬೆಂಗಳೂರು, ಅ.15- ಇಂದು ಮುಂಜಾನೆಯಿಂದ ಸುರಿಯುತ್ತಿರುವ ಸೋನೆ ಮಳೆಗೆ ಸಿಲಿಕಾನ್ ಸಿಟಿ ಜನ ಸ್ಯಾನೆ ಬೇಸರ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲಾ -ಕಾಲೇಜಿಗೆ ತೆರಳಲು ಹಾಗೂ ಉದ್ಯೋಗಿಗಳು ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರದಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು ರೈಲ್ವೆ ಅಂಡರ್ ಪಾಸ್‌ಗಳು, ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಮಳೆ ನೀರಿನಿಂದ ತುಂಬಿ ಹೋಗಿವೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಳೆಯಿಂದ ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಗರದ ಲಾಲ್ ಬಾಗ್ ರಸ್ತೆ , ಮಾವಳ್ಳಿ ರಸ್ತೆ, ಜೆಜಿ ರಸ್ತೆ, ಶಾಂತಿ ನಗರ, ಬಸವನಗುಡಿ ರಸ್ತೆ, ಡಬಲ್ ರೋಡ್, ಕೋರಮಂಗಲ, ಯಶವಂತಪುರ, ಸೆಂಟ್ ಜಾನ್ಸ್, ಕೆಆರ್ ಮಾರ್ಕೆಟ್ , ಗಾಂಧಿ ಬಜಾರ್, ಜಯನಗರ, ಮೈಸೂರು ರಸ್ತೆ, ಜಾಲಹಳ್ಳಿ ಕ್ರಾಸ್ ಇತರೆಡೆ ಭಾರೀ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

ಅಲ್ಲದೆ ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿ ವಾಹನ ಚಲಾಯಿಸಲಾಗದೆ ವಾಹನ ಸವಾರರು ಕೆಲವು ಕಡೆ ಬಿದ್ದಿರುವ ವರದಿಗಳು ಆಗಿವೆ. ನಗರದ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು ಫೈ – ಓವರ್‌ಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಓಕುಳಿಪುರಂನ ಅಷ್ಟಪಥ ಸೇತುವೆಯಲ್ಲಿ ಆಳುದ್ದ ನೀರು ನಿಂತ ಪರಿಣಾಮ ಮೆಜೆಸ್ಟಿಕ್ ಮತ್ತಿತರ ಪ್ರದೇಶಗಳಿಗೆ ತೆರಳುವ ವಾಹನಗಳು ಸರದಿ ಸಾಲಿನಲ್ಲಿ ನಿಂತ ಪರಿಣಾಮ ಕಿ.ಮೀ ಗಟ್ಟಲೆ ವಾಹನ ದಟ್ಟಣೆ ಕಂಡುಬಂದಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್‌ಎಂಟಿ ಲೇಔಟ್ ನಲ್ಲಿ ಬೃಹದಾಕಾರದ ಮರವೊಂದು ಧರೆಗುರುಳಿ ಬಿದ್ದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಮೂರು ತಿಂಗಳ ಹಿಂದೆ ಮರ ತೆರವು ಮಾಡುವಂತೆ ದೂರು ನೀಡಿದ್ದರೂ ಬಿಬಿಎಂಪಿಯವರು ಈ ಕಡೆ ತಲೆ ಹಾಕದ ಪರಿಣಾಮ ಇಂತಹ ಅನಾಹುತ ಜರುಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಬಿಟಿಎಂ ಬಡಾವಣೆಯ 29ನೇ ಕ್ರಾಸ್‌ನಲ್ಲೂ ಮರವೊಂದು ಉರುಳಿಬಿದ್ದಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿಗಳು ಮರ ತೆರವುಗೊಳಿಸುವ ಕಾರ್ಯ ಕೈಗೊಂಡರು. ಪಟ್ಟಾಭಿರಾಮನಗರ, ಅರಕೆರೆ ಮತ್ತಿತರ ಪ್ರದೇಶಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ.

RELATED ARTICLES

Latest News