ಬೆಂಗಳೂರು,ಮೇ 16- ನೈರುತ್ಯ ಮುಂಗಾರು ಪ್ರಾರಂಭಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಮುಂದುವರೆಯಲಿದೆ. ಮೇಲೈ ಸುಳಿಗಾಳಿ, ಟ್ರಫ್ ಹಾಗೂ ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ, ಅರಬ್ಬೀಸಮುದ್ರದಲ್ಲಿ ಮಳೆಗೆ ಪೂರಕವಾದ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಇದರಿಂದ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೆಡೆ ಹಗುರ ಇಲ್ಲವೇ ತುಂತುರು ಮಳೆ ಆಗಾಗ್ಗೆ ಬೀಳುವ ಸಾಧ್ಯತೆಗಳಿವೆ.
ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ಮುಂಗಾರು ಸಕಾಲಕ್ಕೆ ಆಗಮಿಸಲಿದೆ ಎಂಬ ಮುನ್ಸೂಚನೆ ನೀಡಿದೆ. ಮೇ ಅಂತ್ಯ ಇಲ್ಲವೇ ಜೂನ್ 1 ರಂದು ಮುಂಗಾರು ಮಳೆ ಕೇರಳ, ಕರಾವಳಿ ಪ್ರವೇಶಿಸುವ ಸಾಧ್ಯತೆಯಿದ್ದು, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುವ ಸಾಧ್ಯತೆಯಿದೆ.
ಇದುವರೆಗಿನ ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ ವಾಡಿಕೆ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ವಾಡಿಕೆಗಿಂತ ಶೇ.24 ರಷ್ಟು ಮಳೆ ಕೊರತೆ ಉಂಟಾಗಿದ್ದು, ಇದರಿಂದ ರಾಜ್ಯದಲ್ಲಿ ತೀವ್ರ ಬರದ ಛಾಯೆ ಆವರಿಸಿತ್ತು. ಪೂರ್ವ ಮುಂಗಾರು ಕೂಡ ಮಾರ್ಚ್, ಏಪ್ರಿಲ್‌ನಲ್ಲಿ ಕೈಕೊಟ್ಟಿದ್ದು, ಜನರು ಕಂಗಾಲಾಗುವಂತೆ ಮಾಡಿತ್ತು.
ಮೇನಲ್ಲಿ ಪೂರ್ವ ಮುಂಗಾರು ಮಳೆ ಅಲ್ಲಲ್ಲಿ ಬೀಳುತ್ತಿದ್ದು, ಆಶಾಭಾವನೆ ಮೂಡಿಸಿದೆ. ಇದರ ಬೆನ್ನಲ್ಲೇ ಸಕಾಲಕ್ಕೆ ಮುಂಗಾರು ಆಗಮನವಾಗಿ ವಾಡಿಕೆ ಪ್ರಮಾಣದ ಮಳೆಯಾಗಲಿದೆ ಎಂಬ ಮುನ್ಸೂಚನೆ ದೊರೆತಿರುವುದು ಜನರಲ್ಲಿನ ಆತಂಕ ದೂರ ಮಾಡಿದಂತಾಗಿದೆ.
ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಕಂಬ, ಬಾಳೆ, ತೆಂಗು, ಮಾವು ಮೊದಲಾದ ಬೆಳೆಗಳಿಗೆ ಹಾನಿಯಾದ ವರದಿಯಾಗಿದೆ.ಹವಾ ಮುನ್ಸೂಚನೆ ಪ್ರಕಾರ, ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.