ಬೆಂಗಳೂರು, ಆ.10-ಕಳೆದ ಒಂದು ವಾರದಿಂದ ಕ್ಷೀಣಿಸಿದ್ದ ಮುಂಗಾರು ಮಳೆ ಮತ್ತೆ ಆಗಸ್ಟ್ 12ರಿಂದ ಚುರುಕಾಗುವ ಮುನ್ಸೂಚನೆಗಳಿವೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರಾವಳಿ, ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಸೋಮವಾರದಿಂದ ಆ.15ರವರೆಗೆ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮುಂದುವರೆದಿದೆ. ಆದರೆ, ಭಾರೀ ಮಳೆಯಾಗುತ್ತಿಲ್ಲ. ಭಾರೀ ಮಳೆಯಾಗಿ ಜನಜೀವನ ತತ್ತರಿಸುವಂತೆ ಮಾಡಿದ್ದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಮುನ್ಸೂಚನೆಗಳಿವೆ.
ಉತ್ತರ ಒಳನಾಡಿನಲ್ಲೂ ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆದಿದೆ. ದಕ್ಷಿಣ ಒಳನಾಡಿನಲ್ಲೂ ಕೆಲವೆಡೆ ವ್ಯಾಪಕವಾದ ಮಳೆಯಾಗುತ್ತಿದ್ದು, ಇನ್ನೆರಡು ದಿನದ ನಂತರ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.
ಆಗಸ್ಟ್ ಒಂದರಿಂದ ಇದುವರೆಗೆ ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆ ಮಳೆಯಾಗಿದೆ. ಕೆಲವೆಡೆ ಕೊರತೆ ಮತ್ತೆ ಕೆಲವೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದಂತಾಗಿದೆ.
ಕೇರಳದ ವಯನಾಡು, ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಪಿಲಾ, ಕಾವೇರಿ, ಹೇಮಾವತಿ, ತುಂಗಾ, ಭದ್ರಾ, ಶರಾವತಿ ನದಿಗಳ ಪ್ರವಾಹ ಇಳಿಕೆಯಾಗಿದೆ. ಪ್ರಮುಖ ಜಲಾಶಯಗಳ ಒಳ ಹರಿವು ಸಹ ಗಣನೀಯವಾಗಿ ಕಡಿಮೆಯಾಗಿದೆ.
ಅದೇ ರೀತಿ ನದಿಗೆ ಬಿಡಲಾಗುತ್ತಿದ್ದ ಹೊರ ಹರಿವು ಸಹ ಕಡಿಮೆಯಾಗಿದೆ. ಇದರಿಂದ ಆಯಾ ನದಿ ಪಾತ್ರದ ಜನರಿಗೆ ಉಂಟಾಗಿದ್ದ ಪ್ರವಾಹದ ಆತಂಕ ತಾತ್ಕಾಲಿಕವಾಗಿ ದೂರವಾಗಿದೆ. ಆದರೆ, ಕೃಷ್ಣಾ ಕೊಳ್ಳದ ತುಂಗಭದ್ರಾ, ಭೀಮಾ ಹಾಗೂ ಕೃಷ್ಣಾ ನದಿಗಳಲ್ಲಿ ಇನ್ನೂ ಪ್ರವಾಹದ ಪರಿಸ್ಥಿತಿ ದೂರವಾಗಿಲ್ಲ.