ಹುಳಿಯಾರು, ಅ.12- ಕಳೆದ ಮೂರ್ನಾಲ್ಕು ದಿನಗಳಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬೀಳುತ್ತಿರುವ ಮಳೆಯಿಂದ ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಜೀವದಾನ ಲಭಿಸಿದಂತಾಗಿದ್ದು, ಬೆಳೆಗಾರರು ಈಗ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ತಾಲೂಕಿನಲ್ಲಿ ಮಳೆಯ ಕೊರತೆಯಿಂದ ವಾಣಿಜ್ಯ ಬೆಳೆ ಕೈ ಕೊಟ್ಟಿತ್ತು. ನಂತರ ಅನುಮಾನದಿಂದಲೇ ರಾಗಿ ಬಿತ್ತನೆ ಮಾಡಿದ್ದ ರೈತರಿಗೆ ಆಗಸ್ಟ್‌ನಲ್ಲಿ ಸುರಿದ ಮಳೆ ಭರವಸೆ ಮೂಡಿಸಿತ್ತು. ನಂತರ ಮಳೆ ಬಾರದೇ ಬಿಸಿಲಿಗೆ ಪೈರೆಲ್ಲಾ ಒಣಗಿಸಲಾರಂಭಿಸಿತ್ತು.
ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ ರಾಗಿ ಪೈರು ರಕ್ಷಣೆ ಮಾಡಿಕೊಂಡಿದ್ದರು. ಇನ್ನೂ ಕೆಲವರು ಅಕ್ಕಪಕ್ಕದ ತೋಟದವರಿಂದ ಇಂತಿಷ್ಟು ರಾಗಿ ಕೊಡುವ ಒಪ್ಪಂದ ಮಾಡಿಕೊಂಡು ನೀರು ಪಡೆದು ರಾಗಿ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಯಾವುದೇ ನೀರಿನ ವ್ಯವಸ್ಥೆ ಇಲ್ಲದ ರೈತರು ದೇವರ ಮೇಲೆ ಭಾರ ಹಾಕಿ ಕಪೆ ತೋರು ವರುಣ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದ್ದರು.
ರೈತರ ಪ್ರಾರ್ಥನೆ ವರುಣನಿಗೆ ಮುಟ್ಟಿದ ಪರಿಣಾಮವೋ ಏನೋ ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ರಾತ್ರಿಯಿಡಿ ಸುರಿದ ಜಡಿಮಳೆ ರಾಗಿ ಬೆಳೆಗೆ ಮರುಜೀವ ನೀಡಿ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.
ತಾಲೂಕಿನ ಕೆಲ ಭಾಗದಲ್ಲಿ ದಾಖಲೆಯ 100 ಮಿಮೀ ಮಳೆಯಾಗಿದೆ. ಉಳಿದ ಕಡೆದ ಎರಡು ದಿನವೂ ಸರಾಸರಿ 30 ಮಿಮೀ ಮಳೆಯಾಗಿದೆ. ಪರಿಣಾಮ ಮುಂಚೆ ಬಿತ್ತಿದ ರಾಗಿ ಈಗಾಗಲೇ ತೆನೆ ಹೊಡೆದಿದೆ. ತಡವಾಗಿ ಬಿತ್ತಿದ್ದ ರಾಗಿ ಇನ್ನೇನು ಕೆಲವೇ ದಿನಗಳಲ್ಲಿ ತೆನೆಯೊಡೆಯಲಿದೆ. ಮುಂದಿನ ದಿನಗಳಲ್ಲಿ ಒಂದೆರಡು ಉತ್ತಮ ಮಳೆ ಆದರೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಅಲ್ಲದೆ ರಾಗಿ ಹುಲ್ಲು ಕೂಡ ಚೆನ್ನಾಗಿ ಬೆಳೆದು ದನಕರಗಳ ಮೇವಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.