ಜೈಪುರ,ನ.2-ಮಧ್ಯವರ್ತಿ ಮೂಲಕ 15 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಂಧಿಸಿರುವ ಘಟನೆ ನಡೆದಿದೆ.ಬಂಧಿತರನ್ನು ನೇವಲ್ ಕಿಶೋರ್ ಮೀನಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ.
ರಾಜಸ್ಥಾನದಲ್ಲಿ ಇಂದು ಎಸಿಪಿ ಅಧಿಕಾರಿಗಳು ಹಲವಾರು ಕಡೆ ದಾಳಿ ನಡೆಸಿದ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಮಧ್ಯವರ್ತಿಗಳಿಂದ 15 ಲಕ್ಷ ಲಂಚಕಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಈ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ರಾಜಸ್ಥಾನದ ವಿವಿಧ ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಕ್ರಮ ಹಣ ವಹಿವಾಟು ಪ್ರಕರಣ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಪುತ್ರ ವೈಭವ್ ಗೆಲ್ಹೋಟ್ ಹಾಗು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
“ಪಾಪ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತಿದೆ”
ಈ ಪ್ರಕರಣವು ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿತ್ತು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಇಡಿ ಸಮನ್ಸ್ ಜಾರಿ ಮಾಡಿದೆ ಎಂದು ಮಾಜಿ ಡಿಸಿಎಂ ಸಚಿನ್ ಪೈಲೆಟ್ ಸೇರಿದಂತೆ ಅನೇಕ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.
ಒಂದು ಕಡೆ ರಾಜಸ್ಥಾನದಲ್ಲಿ ಇಡಿ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಎಸಿಬಿಯವರು ಅದೇ ಇಡಿ ಅಧಿಕಾರಿಗಳನ್ನು ಲಂಚಕ್ಕೆ ಬೇಡಿಕೆಇಟ್ಟ ಆರೋಪದ ಹಿನ್ನಲೆಯಲ್ಲಿ ಬಂಧಿಸಿರುವುದು ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಇನ್ನಷ್ಟು ಕಾನೂನಿನ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ.