Sunday, October 20, 2024
Homeರಾಷ್ಟ್ರೀಯ | Nationalರಾಜಸ್ಥಾನದಲ್ಲಿ ಬಸ್‌‍-ಟೆಂಪೋ ನಡುವೆ ಡಿಕ್ಕಿ : 8 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

ರಾಜಸ್ಥಾನದಲ್ಲಿ ಬಸ್‌‍-ಟೆಂಪೋ ನಡುವೆ ಡಿಕ್ಕಿ : 8 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

Rajasthan Accident: 12 Killed Including 8 Children In Collision Between Auto-Rickshaw

ಐಪುರ್‌(ರಾಜಸ್ಥಾನ),ಅ.20- ಬಸ್‌‍ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿರುವ ಘಟನೆ ಕಳೆದ ತಡರಾತ್ರಿ ರಾಜಸ್ಥಾನದ ಧೋಲ್ಪುರ್‌ ಜಿಲ್ಲೆಯಲ್ಲಿ ಸಂಬವಿಸಿದೆ.

ಗ್ವಾಲಿಯರ್‌ನಿಂದ ಜೈಪುರಕ್ಕೆ ಹೋಗುತ್ತಿದ್ದ ವೇಗದ ಸ್ಲೀಪರ್‌ ಕೋಚ್‌ ಬಸ್‌‍ ಸುಮಿಪುರ್‌ ಬಳಿ ಟೆಂಪೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದಂಪತಿ ಮತ್ತು ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಢು ಬ್ಯಾರಿ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ ಶಿವಲಹರಿ ಮೀನಾ ತಿಳಿಸಿದ್ದಾರೆ.

ಇರ್ಫಾನ್‌ ಅಲಿಯಾಸ್‌‍ ಬಂಟಿ ಎಂಬವರ ಮಗಳು ಅಸಾ (14), ಗಫೊ ಎಂಬವರ ಮಗ ಇರ್ಫಾನ್‌ (38), ಇರ್ಫಾನ್‌ ಮಕ್ಕಳಾದ ಸಲಾನ್‌ (8), ಸಾಖಿರ್‌ (6), ಜಾಹಿರ್‌ ಎಂಬವರ ಪುತ್ರ ಡನಿಶ್‌ (10) ಆಸೀಫ್‌ ಮಗ ಅಜಾನ್‌ (5), ನನು ಎಂಬವರ ಪತ್ನಿ ಜರೀನಾ (35), ಇವರ ಮಕ್ಕಳಾದ ಮಗಳು ಸುಖಿ (7), ಮಗ ಸನಿಫ್‌ (9) ಮತ್ತು ಆಶಿಯಾನಾ (10) ಮೃತಪಟ್ಟವರೆಂದು ಗುರುತಿಸಲಾಗಿದೆ.

ಇರ್ಫಾನ್‌ ಪತ್ನಿ ಜೂಲಿ (32), ಧರ್ಮೇಂದ್ರ (38) ಹಾಗು ಪ್ರವೀಣ್‌ (32) ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ 8 ಮಂದಿ ಮಕ್ಕಳಿದ್ದಾರೆ. ಬಸ್‌‍ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು ದೋಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಬರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಬರಿ ನಗರದ ಗುಮಟ್‌ ಮೊಹಲ್ಲಾದ ಕರೀಂ ಕಾಲನಿಯ ಈ ಕುಟುಂಬ ಬರೌಲಿ ಗ್ರಾಮದಲ್ಲಿರುವ ತಮ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಭಾತ್‌ ಕಾರ್ಯಕ್ರಮ ಮುಗಿಸಿ ವಾಪಸ್‌‍ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸುಮಾರು 11 ಗಂಟೆಯ ವೇಳೆಗೆ ಸುನಿಪುರ್‌ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಸ್ಲೀಪರ್‌ ಕೋಚ್‌ ಬಸ್‌‍ ಇವರಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ, 11 ಮಂದಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಮೃತದೇಹಗಳ ಶವಪರೀಕ್ಷೆ ಭಾನುವಾರ ನಡೆಯಲಿದೆ. ಟೆಂಪೋ ಮತ್ತು ಬಸ್ಸನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ರಸ್ತೆ ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ಕೈಗೊಂಡಿರುವುದಾಗಿ ಅವರು ಇದೇ ವೇಳೆ ಹೇಳಿದರು.

ರಸ್ತೆ ಅಪಘಾತ ಸ್ಥಳದಲ್ಲಿ ಭಾರಿ ಗೊಂದಲ, ಗಲಾಟೆ ವ್ಯಕ್ತವಾಯಿತು. ಘಟನಾ ಸ್ಥಳದಲ್ಲಿ ಹಾದು ಹೋಗುತ್ತಿದ್ದ ಇತರೆ ವಾಹನ ಚಾಲಕರು ತಮ ವಾಹನಗಳನ್ನು ನಿಲ್ಲಿಸಿ ನಮಗೆ ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅಪಘಾತದ ನಂತರ ಗುಮತ್‌ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಮೃತರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಪ್ರದೇಶವನ್ನು ಬೆಚ್ಚಿ ಬೀಳಿಸಿದೆ.

ಅಪಘಾತದ ನಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಪಘಾತದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಪ್ರಾಥಮಿಕ ತನಿಖೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ. ಬಸ್‌‍ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News