ಜೈಪುರ,ಮೇ 15- ಕೋಲಿಹಾನ್ನ ಹಿಂದೂಸ್ಥಾನ್ ಕಾಪರ್ ಲಿಮಿಟೆಡ್ ಗಣಿಯಲ್ಲಿ ಲಿಫ್ಟ್ ಹಗ್ಗ ಮುರಿದು ಗಣಿಯೊಳಗೆ ಸಿಲುಕಿಗೊಂಡಿದ್ದ 14 ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ವಿಜಿಲೆನ್ಸ್ ತಂಡದ ಕನಿಷ್ಠ 14 ಜನರು ಗಣಿಯಲ್ಲಿ ಸಿಲುಕಿಕೊಂಡಿದ್ದರು.
ಪಿಎಸ್ಯು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ 14 ಅಧಿಕಾರಿಗಳು ವಿಜಿಲೆನ್ಸ್ ತಂಡದ ಸದಸ್ಯರಾಗಿದ್ದಾರೆ. ಮಂಗಳವಾರ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಗಣಿ ಲಿಫ್ಟ್ ಕುಸಿತದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ, ಆದರೆ ಕೆಲವರ ಕೈ, ಇನ್ನು ಕೆಲವರ ಕಾಲು ಮುರಿದಿದೆ.
ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಜುಂಜುನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರವೀಣ್ ಶರ್ಮಾ ಅವರು ಸುದ್ದಿಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ಕಾರ್ಮಿಕರೊಂದಿಗೆ ವಿಜಿಲೆನ್ಸ್ ತಂಡವು ಪರಿಶೀಲನೆಗಾಗಿ ಗಣಿ ಒಳಗೆ ಹೋದ ಸಂದರ್ಭ ಘಟನೆ ನಡೆದಿದೆ. ಲಿಫ್ಟ್ ಮೂಲಕ ಗಣಿಯಿಂದ ಹೊರಬರುತ್ತಿರುವ ವೇಳೆ ಲಿಫ್ಟ್ ನ ಶಾಫ್ಟ್ (ಹಗ್ಗ) ಮುರಿದು ಅಧಿಕಾರಿಗಳು, ಸಿಬ್ಬಂದಿ ಸಿಲುಕಿಕೊಂಡಿದ್ದರು.
ಘಟನೆ ತಿಳಿಯುತ್ತಿದ್ದಂತೆ ತಡರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. 12 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ ಎಲ್ಲರನ್ನೂ ರಕ್ಷಿಸಲಾಗಿದೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ