ಬೆಂಗಳೂರು, ಮಾ.29- ರೀಲ್ಸ್ ಗಾಗಿ ಮಚ್ಚು ಹಿಡಿದು ಹುಚ್ಚಾಟವಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಕನ್ನಡ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪ್ರಕರಣ ಸಂಬಂಧ ಬಸವೇಶ್ವರ ನಗರ ಠಾಣೆ ಪೊಲೀಸರು ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ನಿನ್ನೆ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು ವಾದ-ಪ್ರತಿವಾದ ಆಲಿಸಿದ ನ್ಯಾಯಲಯ ಈ ರೀತಿ ಘಟನೆ ಮರುಕಳಿಸಬಾರದು ಎಂದು ಎಚ್ಚರಿಸಿ ಇವರಿಬ್ಬರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು.
ಈ ನಡುವೆ ಜಾಮೀನು ಪ್ರತಿ ಜೈಲು ಅಧಿಕಾರಿಗಳಿಗೆ ತಡವಾಗಿ ಲಭಿಸಿದ ಹಿನ್ನಲೆಯಲ್ಲಿ ನಿನ್ನೆ ಬಿಡುಗಡೆ ಭಾಗ್ಯ ಲಭಿಸಿರಲಿಲ್ಲ. ಹಾಗಾಗಿ ಇಂದು ಬೆಳಿಗ್ಗೆ ಇವರಿಬ್ಬರೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಏನಿದು ಪ್ರಕರಣ
ಖಾಸಗಿ ವಾಹಿನಿ ಕಾರ್ಯಕ್ರಮದ ಶೂಟಿಂಗ್ ಸಮಯದಲ್ಲಿ ರಜತ್ ಹಾಗೂ ವಿನಯ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಗೆ ಬಳಸಿದ ಮಚ್ಚು ಫೈಬರ್‌ನದು ಎಂದು ಪೊಲೀಸರ ತನಿಖೆ ಹಾದಿ ತಪ್ಪಿಸಿದ್ದರು. ಆದರೆ ರೀಲ್ಸ್ ಗೆ ಬಳಸಿದ ಅಸಲಿ ಮಚ್ಚು ಇದುವರೆಗೂ ಪತ್ತೆಯಾಗಿಲ್ಲ.