ತುಮಕೂರು,ಮಾ.23- ಸಹಕಾರ ಸಚಿವ ಕೆ.ಎನ್. ರಾಜಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮೊದಲಿನಿಂದಲೂ ಒಳಗೊಳಗೆ ಹಲ್ಲು ಮಸೆಯುತ್ತಿದ್ದು, ಆಗಾಗ್ಗೆ ಬಹಿರಂಗ ಹೇಳಿಕೆಗಳ ಮೂಲಕ ಅಸಮಾಧಾನ ಸ್ಫೋಟಗೊಳ್ಳುತ್ತಲೇ ಇದೆ. ಈಗ ರಾಜಣ್ಣ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರು ಡಿ.ಕೆ.ಶಿವಕುಮಾರ್‌ರವರ ಆಪ್ತ ಶಾಸಕನ ವಿರುದ್ಧ
ಸ್ಫೋಟಕ ಹೇಳಿಕೆ ನೀಡುವ ಮೂಲಕ ಮತ್ತೊಂದು ಅಸಮಾಧಾನಕ್ಕೆ ಮುನ್ನುಡಿ ಬರೆದಿದ್ದಾರೆ. ಕೆ.ಎನ್.ರಾಜಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಬಹಿರಂಗ ಹೇಳಿಕೆ ನೀಡುವ ಮೂಲಕ ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ 2 ತಿಂಗಳ ಹಿಂದೆ ಶಾಸಕ ಕುಣಿಗಲ್ ರಂಗನಾಥ್‌ರವರು ಕರೆ ಮಾಡಿ ಅಪ್ಪ-ಮಗ ಲಿಂಕ್ ಕೆನಲ್‌ಗೆ ಅಡಚಣೆ ಮಾಡುತ್ತಿದ್ದೀರಾ ಎಂದು ಧಮ್ಕಿ ಹಾಕಿದ್ದಾರೆ. ನಾವು ಯಾವುದನ್ನೂ ನಿಲ್ಲಿಸಿಲ್ಲ. ಟೆಂಡರ್ ಆಗಿದೆ. ಕೆಲಸ ಶುರುವಾಗಿದೆ. ಕುಣಿಗಲ್ ತಾಲೂಕಿಗೆ ನೀರು ಬರುವುದಕ್ಕೆ ಅಪ್ಪ-ಮಗ ಅಡಚಣೆ ಮಾಡುತ್ತಿದ್ದೀರಾ ಎಂದು ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹೇಮಾವತಿ ನಾಲೆಯಿಂದ ಗುಬ್ಬಿ, ಕುಣಿಗಲ್, ತುರುವೇಕೆರೆ ಮೂಲಕ ತುಮಕೂರು ಜಿಲ್ಲೆಯ ಇತರ ಜಿಲ್ಲೆಗಳಿಗೆ ನೀರು ಬರಬೇಕು. ಆರಂಭದಲ್ಲೇ ಇವರು ನೀರು ಹರಿಸಿಕೊಂಡರೆ ಕೊನೆಯ ಭಾಗದ ಕೊರಟಗೆರೆಗೆ ನೀರು ತಲುಪುವುದು ಹೇಗೆ? ಎಂದು ಪ್ರಶ್ನಿಸಿದರು.
ಇತ್ತೀಚೆಗೆ ನಡೆದ ಸಭೆಯಲ್ಲಿ ಕೊರಟಗೆರೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಗಮನ ಸೆಳೆದಿದ್ದಾರೆ. ಇದಕ್ಕೆ ನಮ ವಿರುದ್ಧ ಧಮ್ಕಿ ಹಾಕುವ ಕೆಲಸಗಳಾಗುತ್ತಿವೆ. ಪ್ರಭಾವಿ ಸಚಿವರಿದ್ದಾರೆ ಎಂಬ ಕಾರಣಕ್ಕೆ ಕುಣಿಗಲ್‌ನ ಶಾಸಕರು ನೀರನ್ನು ಬಳಸಿಕೊಂಡರೆ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳ ಜನ ಏನಾಗಬೇಕು?, ನಿಮ ಕ್ಷೇತ್ರಕ್ಕೆ ನೀರು ಹರಿಸಿಕೊಳ್ಳಲು ನಮ ಅಭ್ಯಂತರವಿಲ್ಲ. ಆದರೆ ನಮ ತಾಲೂಕಿಗೆ ಅನ್ಯಾಯ ಮಾಡುತ್ತಿರುವುದೇಕೆ? ಎಂದು ಕೇಳಿದರು.
ತುಮಕೂರು ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರೆ ಕುಣಿಗಲ್ ತಾಲ್ಲೂಕಿನ ವಿಚಾರ ಮಾತ್ರ ಪ್ರಸ್ತಾಪವಾಗುತ್ತಿದೆ. ಉಳಿದಂತೆ ಯಾವ ತಾಲ್ಲೂಕುಗಳಿಲ್ಲವೇ?, ತುಮಕೂರು, ತುಮಕೂರು ಗ್ರಾಮಾಂತರ, ಮಧುಗಿರಿ, ಕೊರಟಗೆರೆ, ಗುಬ್ಬಿ ಇತರ ತಾಲ್ಲೂಕುಗಳು ಏನಾಗಬೇಕು? ಎಂದು ಪ್ರಶ್ನಿಸಿದರು.
ನಾನು ರಾಜಕೀಯ ಪ್ರೇರಿತನಾಗಿ ಮಾತನಾಡುತ್ತಿಲ್ಲ. ತಾಲ್ಲೂಕಿನ ಹಿತಾಸಕ್ತಿಯ ಕಾರಣಕ್ಕಾಗಿ ಮಾತನಾಡುತ್ತಿದ್ದೇನೆ. ಹೇಮಾವತಿ ನದಿಯ ನೀರು ಮಧುಗಿರಿಗೆ ಬಂದು ವಾಪಸ್ ಹೋಗುವುದಿಲ್ಲ. ಇದು ಕೊನೆಯ ಭಾಗ ಮಾತ್ರ. ಇವರಿಗೆ ಕುಣಿಗಲ್ ಮಾತ್ರ ಕಾಣುತ್ತದೆಯೇ?, ಇನ್ಯಾವ ತಾಲ್ಲೂಕುಗಳಿಲ್ಲವೇ?, ಶಾಸಕರು ಎಲ್ಲಾ ತಾಲ್ಲೂಕುಗಳನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಸಂಚಲನ :
ಸಹಕಾರ ಸಚಿವ ಕೆ.ಎನ್.ರಾಜಣ್ಣ ಇತ್ತೀಚೆಗೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿ ತಮ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನಗಳಾಗಿವೆ. ಕರ್ನಾಟಕ ಹನಿಟ್ರ್ಯಾಪ್‌ನ ಫ್ಯಾಕ್ಟರಿಯಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಅದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಹಲವು ಶಾಸಕರು ಮುಖ್ಯಮಂತ್ರಿಯಾಗುವ ಆಕಾಂಕ್ಷೆಯುಳ್ಳ ವ್ಯಕ್ತಿ ಹನಿಟ್ರ್ಯಾಪ್‌ನ ಸೂತ್ರಧಾರ ಎಂದು ಕುಹಕವಾಡಿದ್ದರು.
ಈ ಮೊದಲು ರಾಜಣ್ಣ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಹಲವಾರು ಸಂದರ್ಭಗಳಲ್ಲಿ ಬಹಿರಂಗ ಹೇಳಿಕೆ ನೀಡಿ ಕೆಂಡ ಕಾರಿದ್ದರು. ಅಫೆಕ್‌್ಸ ಬ್ಯಾಂಕ್ ಚುನಾವಣೆ ವಿಚಾರವಾಗಿ ಖುದ್ದು ಡಿ.ಕೆ.ಶಿವಕುಮಾರ್‌ರವರೇ ರಾಜಣ್ಣ ಅವರನ್ನು ಭೇಟಿ ಮಾಡಲು ಹೋದಾಗ ಅವರು ಕೈಗೆ ಸಿಕ್ಕಿರಲಿಲ್ಲ. ಒಳಗೊಳಗೇ ರಾಜಣ್ಣ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ತೀವ್ರವಾದ ಶೀಥಲ ಸಮರ ನಡೆಯುತ್ತಿದೆ.
ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಡಿ.ಕೆ.ಶಿವಕುಮಾರ್‌ರವರ ಆಪ್ತ ಕುಣಿಗಲ್ ಕ್ಷೇತ್ರದ ಡಾ.ರಂಗನಾಥ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಮುಸುಕಿನ ಗುದ್ದಾಟವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿದ್ದಾರೆ.