ಚೆನ್ನೈ (ತಮಿಳುನಾಡು),ಅ.4- ಅನಾರೋಗ್ಯದ ಹಿನ್ನೆಲೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಇಂದು ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ.ಸೆಪ್ಟೆಂಬರ್ 30ರಂದು ಎದೆನೋವು ಕಾಣಿಸಿಕೊಂಡಿದ್ದರಿಂದ ರಜನೀಕಾಂತ್ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ರಜನಿಕಾಂತ್ ಅವರನ್ನು ಸೆಪ್ಟೆಂಬರ್ 30ರಂದು ಚೆನ್ನೈನ ಗ್ರೀಮ್ಸೌ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯದಿಂದ (ಅಯೋರ್ಟಾ) ಹೊರಡುವ ರಕ್ತನಾಳದಲ್ಲಿ ಊತವಿದೆ. ರಜನಿಕಾಂತ್ ಅವರು ಚಿಕಿತ್ಸೆ ಪಡೆದಿದ್ದಾರೆ ಎಂದು ಇನ್ನೆರಡು ದಿನಗಳಲ್ಲಿ ಮನೆಗೆ ಮರಳುತ್ತಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿತ್ತು.
ಇನ್ನು ರಜನಿಕಾಂತ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರಮೋದಿ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್, ಮಕ್ಕಳ್ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ ಮತ್ತು ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ನಟ ದಳಪತಿ ವಿಜಯ್ ಅವರು ಹಾರೈಸಿದ್ದರು.
ರಜನೀಕಾಂತ್ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಅವರ ಅಭಿಮಾನಿಗಳು ಆತಂಕಿತರವಾಗಿದ್ದರು. ಸ್ವತಃ ಪ್ರಧಾನಿ ಮೋದಿ, ರಜನೀಕಾಂತ್‌ರ ಪತ್ನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ರಜನೀಕಾಂತ್‌ರ ಪುತ್ರಿ ಸೌಂದರ್ಯ ರಜನೀಕಾಂತ್, ತಿರುವತ್ತಿಯೂರ್ ಶ್ರೀ ವಾದಿವುದೈ ದೇವಾಲಯಕ್ಕೆ ಭೇಟಿ ಮಾಡಿ, ಅಪ್ಪನ ಶೀಘ್ರ ಗುಣಮುಖ ಕೋರಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು.
ತಮಿಳುನಾಡಿನ ರಾಜ್ಯಪಾಲರು ಜಗತ್ತಿನಾದ್ಯಂತ ಇರುವ ರಜನಿಕಾಂತ್ ಅವರ ಕೋಟ್ಯಂತರ ಅಭಿಮಾನಿಗಳ ಜೊತೆಗೆ ನಾನು ನಿಂತಿದ್ದೇನೆ, ರಜನೀಕಾಂತ್ ಅವರ ಕ್ಷಿಪ್ರ ಮತ್ತು ಸುಗಮ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದರು.ರಜನೀಕಾಂತ್ ನಟನೆಯ ವೇಟ್ಟೈಯಾನ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನಿ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಇನ್ನೂ ಕೆಲವು ಸ್ಟಾರ್ ನಟರು ನಟಿಸಿದ್ದಾರೆ.
ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾದಲ್ಲಿ ನಟಿಸಲು ರಜನೀಕಾಂತ್ ಒಪ್ಪಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು, ಕೆಲ ಕಾಲ ವಿಶ್ರಾಂತಿಗೆ ಸೂಚಿಸಿರುವ ಕಾರಣ, ಕೂಲಿ ಸಿನಿಮಾ ತಡವಾಗುವ ಸಾಧ್ಯತೆ ಇದೆ.