ದಲೈಲಾಮ ಹತ್ಯೆಗೆ ಸ್ಕೆಚ್ : ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆ ಸೂಚನೆ
ಬೆಂಗಳೂರು,ಅ.1- ಬೌದ್ಧ ಧರ್ಮದ ಪರಮೋಚ್ಛ ಧಾರ್ಮಿಕ ಗುರು ದಲೈ ಲಾಮಾ ಅವರನ್ನು ಹತ್ಯೆಗೈಯ್ಯಲು ಬಾಂಗ್ಲಾ ಉಗ್ರರು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ವರದಿ ನೀಡಬೇಕೆಂದು ಸೂಚಿಸಿದ್ದಾರೆ.
ಇದರ ನಡುವೆಯೇ ಕೇಂದ್ರ ಗುಪ್ತಚರ ವಿಭಾಗದ ಮುಖ್ಯಸ್ಥ ರಾಜೀವ್ ಜೈನ್ ಕೂಡ ಡಿಜಿಪಿಗೆ ದೂರವಾಣಿ ಕರೆ ಮಾಡಿ ಪ್ರಕರಣದ ಸಂಬಂಧ ಕೂಡಲೇ ಸಮಗ್ರ ವರದಿ ನೀಡಬೇಕೆಂದು ಸೂಚಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಕೂಡಲೇ ವರದಿ ನೀಡಬೇಕು. ರಾಜಧಾನಿ ಬೆಂಗಳೂರು ಹಾಗೂ ಅದರ ಸಮೀಪದಲ್ಲಿರುವ ರಾಮನಗರದಲ್ಲಿ ಉಗ್ರರು ದಲೈ ಲಾಮಾ ಮತ್ತು ಬಿಹಾರದ ರಾಜ್ಯಪಾಲರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದನ್ನು ಎನ್ಐಎ ಪತ್ತೆ ಮಾಡಿದೆ. ಇದು ಗುಪ್ತಚರ ವಿಭಾಗದ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದೆ.
ಕೇಂದ್ರ ಸರ್ಕಾರ ವರದಿ ನೀಡುವಂತೆ ಸೂಚಿಸುತ್ತಿದ್ದಂತೆ ಕಳೆದ 28ರಂದೇ ಡಿಜಿಪಿ ನೇತೃತ್ವದಲ್ಲಿ ಗುಪ್ತಚರ ವಿಭಾಗ, ಆಂತರಿಕ ಭದ್ರತೆ, ಭಯೋತ್ಪಾದನೆ ನಿಗ್ರಹ ದಳ ಸೇರಿದಂತೆ ಮತ್ತಿತರ ವಿಭಾಗದ ಮುಖ್ಯಸ್ಥರ ಸಭೆ ನಡೆಸಲಾಗಿದೆ.
# ಕೇಂದ್ರ ಅಸಮಾಧಾನ:
ಇತ್ತೀಚೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಪಾಲ್ಗೊಳ್ಳಲು ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಭದ್ರತಾ ಪರಾಮರ್ಶೆ ಬಗ್ಗೆ ಮಾಹಿತಿ ಪಡೆದಿದ್ದರು. ಇತ್ತೀಚೆಗೆ ಕರ್ನಾಟಕ ಉಗ್ರರಿಗೆ ಸುರಕ್ಷಿತ ತಾಣವಾಗುತ್ತಿದೆ. ನಿಷೇಧಿತ ಐಸಿಸ್, ಪಾಕಿಸ್ತಾನ ಹಾಗೂ ಬಾಂಗ್ಲಾ ಮೂಲದ ಕೆಲವು ಉಗ್ರಗಾಮಿ ಸಂಘಟನೆಗಳ ಮುಖಂಡರು ಬೆಂಗಳೂರನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ. ಕರಾವಳಿ ತೀರಾ ಪ್ರದೇಶದ ಮೂಲಕ ಕರ್ನಾಟಕಕ್ಕೆ ಒಳನುಸುಳುವ ಉಗ್ರರು ಬೆಂಗಳೂರು, ತುಮಕೂರು, ಬೆಳಗಾವಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸೇರಿದಂತೆ ಹಲವು ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಲಾಗುತ್ತದೆ. ಈ ಬಗ್ಗೆ ನಿಗಾವಹಿಸಲು ಮಾಹಿತಿ ಕಲೆ ಹಾಕಲು ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗೆ ರಾಜನಾಥ್ ಸಿಂಗ್ ನಿರ್ದೇಶಿಸಿದ್ದರು. ಖುದ್ದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದ್ದರೂ ಗುಪ್ತಚರ ವಿಭಾಗ ಮಾತ್ರ ಈ ಬಗ್ಗೆ ಯಾವುದೇ ಸಣ್ಣ ಮಾಹಿತಿಯನ್ನೂ ಕೂಡ ಕಲೆಹಾಕಲಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
# ಮಾಹಿತಿಯೇ ಇಲ್ಲ:
ಇನ್ನು ಬೆಂಗಳೂರು ಹಾಗೂ ರಾಮನಗರದಲ್ಲಿ ಬಾಂಗ್ಲಾ ಉಗ್ರರು ದುಷ್ಕøತ್ಯ ನಡೆಸಲು ದೊಡ್ಡ ಮಟ್ಟದ ಸಂಚು ರೂಪಿಸುತ್ತಿದ್ದರೂ ಗುಪ್ತಚರ ವಿಭಾಗ ಈ ಬಗ್ಗೆ ಎಳ್ಳಷ್ಟು ನಿಗಾ ವಹಿಸಿರಲಿಲ್ಲ. ಕಡೆ ಪಕ್ಷ ಆ.7ರಂದು ರಾಮನಗರದಲ್ಲಿ ಉಗ್ರರ ಕೌಸರ್ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿರುವ ಮಾಹಿತಿ ಕೂಡ ಇವರಿಗೆ ತಿಳಿದಿರಲಿಲ್ಲ. ಮಾಧ್ಯಮಗಳಲ್ಲಿ ಬಹಿರಂಗಗೊಂಡಾಗ ಮಾತ್ರ ಈ ವಿಷಯ ಪೊಲೀಸ್ ಮುಖ್ಯಸ್ಥರಿಗೆ ತಿಳಿದಿದೆ. ಒಂದಲ್ಲೊಂದು ಕಾರಣದಿಂದ ಕರ್ನಾಟಕ ಉಗ್ರರಿಗೆ ಸ್ವರ್ಗವಾಗುತ್ತಿದೆ. ಗುಪ್ತಚರ ವಿಭಾಗ ಕರಾವಳಿ ಪಡೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ತಪಾಸಣೆ ಕೇಂದ್ರಗಳನ್ನು ಬಿಗಿಗೊಳಿಸುವಂತೆ ಕೇಂದ್ರದಿಂದ ಪದೇ ಪದೇ ಮಾಹಿತಿ ಬಂದರೂ ಅಧಿಕಾರಿಗಳದು ಮಾತ್ರ ಎಂದಿನಂತೆ ದಿವ್ಯ ನಿರ್ಲಕ್ಷ್ಯ.