ಬೆಂಗಳೂರು, ಮೇ 12- ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡದ ಕಿರುತೆರೆ ನಟ, ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ನಡೆಯುತ್ತಿದ್ದ ಸ್ನೇಹಿತನ ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಕೇಶ್ ಪೂಜಾರಿಗೆ ಇಂದು ಮುಂಜಾನೆ 2 ಗಂಟೆ ಸಮಯದಲ್ಲಿ ಲೋ ಬಿಪಿ ಕಾಣಿಸಿಕೊಂಡು ನಂತರ ಹೃದಯಾಘಾತಕ್ಕೀಡಾಗಿದ್ದಾರೆ.
ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತರಾ ಚಾಪ್ಟರ್ 1 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಜಿಯಾಗಿದ್ದ ರಾಕೇಶ್ ಪೂಜಾರಿ ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ರಾಕೇಶ್ ಪೂಜಾರಿ, ಹಲವು ಸ್ಟೇಜ್ ಶೋಗಳ ಆಯ್ಕೆಗೆ 150ಕ್ಕೂ ಹೆಚ್ಚು ಆಡಿಷನ್ ನೀಡಿದ್ದು, ಕಾಮಿಡಿ ಕಿಲಾಡಿ ಸೀಸನ್ 2ಗೆ ಆಯ್ಕೆ ಆಗಿ ರನ್ನರ್ ಅಪ್ ತಂಡದಲ್ಲಿ ಭಾಗಿಯಾಗಿದ್ದರು. ನಂತರ ಸೀಸನ್ 3ರಲ್ಲಿ ಎನ್ನರ್ ಆಗಿ ಕರುನಾಡಿನ ಮನೆ ಮನೆಗೂ ಪರಿಚಿತರಾದರು.
ದಿಲೀಪ್ ರಾಜ್ ನಿರ್ದೇಶಿಸಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆಯ ಪಿಯ ಪಾತ್ರ (ವಿಶ್ವರೂಪ್)ದ ಹೆಸರಿನಲ್ಲೇ ರಾಕೇಶ್ ಪೂಜಾರಿ ಪ್ರಸಿದ್ದಿ ಹೊಂದಿದ್ದರು. ಅಲ್ಲದೆ ಸುದೀಪ್ ನಟನೆಯ ಪೈಲ್ವಾನ್, ಸೃಜನ್ ಲೋಕೇಶ್ ಅಭಿನಯದ ಇದು ಎಂಥಾ ಲೋಕವಯ್ಯ, ತುಳು ಭಾಷೆಯ ಪೆಟ್ಟಮ್ಮಿ, ಅಮ್ಮೆರ್ ಪೊಲೀಸ್ ಸೇರಿದಂತೆ ಹಲವು ಸಿನಿಮಾಗಳಲ್ಲೂ ತಮ್ಮ ಹಾಸ್ಯದ ಹೊನಲಿನಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು.
ರಕ್ಷಿತಾ ಭಾವುಕ:
ರಾಕೇಶ್ ಪೂಜಾರಿ ಅವರ ನಿಧನದ ಸುದ್ದಿ ತಿಳಿದ ಕಾಮಿಡಿ ಕಿಲಾಡಿಗಳು ಸ್ಟೇಜ್ ಶೋನ ಜಡ್ಜ್ ಆಗಿದ್ದ ರಕ್ಷಿತಾ ಪ್ರೇಮ್ ಭಾವುಕ ಪೋಸ್ಟ್ ಮೂಲಕ ಕಂಬನಿ ಮಿಡಿದಿದ್ದಾರೆ. ರಾಕೇಶ್ ಬಳಿ ಇನ್ನು ಮುಂದೆ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾಗಿದ್ದ ಶೋ. ಅದರಲ್ಲಿ ರಾಕೇಶ್ ಕಾಣಿಸಿಕೊಂಡಿದ್ದರು. ಅವರು ನಮ್ಮನ್ನು ಅಗಲಿದ್ದರೂ ಕೂಡ ಅವರ ನಗು ಸದಾ ನಮ್ಮೊಂದಿಗಿರುತ್ತದೆ.
ನಾವು ಅವರನ್ನು ಕಳೆದುಕೊಂಡಿದ್ದೇವೇ ಎಂದು ಕಂಬನಿ ಮಿಡಿದಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಜನ್ 1ರ ವಿಜೇತ ಶಿವರಾಜ್ ಕೆ.ಆರ್. ಪೇಟೆ, ಜಿ.ಗೋವಿಂದೇಗೌಡ (ಜಿ.ಜೆ) ಸೇರಿದಂತೆ ಹಲವು ಕಿರುತೆರೆ ಕಲಾವಿದರು ಕೂಡ ಅಗಳಿದ ಗೆಳೆಯನಿಗೆ ಕಂಬನಿ ಮಿಡಿದಿದ್ದಾರೆ.