ಬೆಂಗಳೂರು, ಮೇ 28- ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆ ಕಬಳಿಸಿರುವ 10,000 ಕೋಟಿ ಬೆಲೆಬಾಳುವ 1,100 ಎಕರೆ ಸರ್ಕಾರಿ ಸ್ವತ್ತನ್ನು ಮರು ವಶಕ್ಕೆ ಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಾವರೆಕೆರೆ ಹೋಬಳಿಯ ಗಂಗೇನಹಳ್ಳಿ, ವರ್ತೂರು, ವರ್ತೂರು ನರಸೀಪುರ ಮತ್ತು ಪೆದ್ದನಪಾಳ್ಯ ಗ್ರಾಮಗಳಲ್ಲಿರುವ ಸುಮಾರು 10,000 ಕೋಟಿ ಗಳಿಗೂ ಹೆಚ್ಚು ಮೌಲ್ಯದ 1,100 ಎಕರೆಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ವತ್ತುಗಳಿಗೆ ಮತ್ತು ದಾಖಲೆಗಳೇ ಇಲ್ಲದ ಸ್ವತ್ತುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ ತೆಕ್ಕೆಗೆ ತೆಗೆದುಕೊಳ್ಳಲು ಯಶಸ್ವಿ ಆಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಡಿಎಲ್‌ಎಫ್ ಸಂಸ್ಥೆ ಕಬಳಿಸಿರುವ 1,100 ಎಕರೆಗಳಷ್ಟು ವಿಸ್ತೀರ್ಣದ ಸ್ವತ್ತುಗಳ ಪೈಕಿ ಶೇ. 90ರಷ್ಟು ಸ್ವತ್ತುಗಳು ಸರ್ಕಾರಿ ಸ್ವತ್ತುಗಳಾಗಿವೆ. ಉಳಿದ ಶೇ.10ರಷ್ಟು ಸ್ವತ್ತುಗಳಿಗೆ ಯಾವುದೇ ದಾಖಲೆಗಳು ಇಲ್ಲವೆಂಬುದು ಅತ್ಯಂತ ಸ್ಪಷ್ಟವಾಗಿದೆ. ತಿಪ್ಪಗೊಂಡನ ಹಳ್ಳಿ ಜಲಾಶಯವನ್ನು ಸೇರಿಕೊಳ್ಳುವ ಅರ್ಕಾವತಿ ನದಿ ಹರಿಯುತ್ತಿರುವ ಸಮೃದ್ಧ ಪ್ರದೇಶಗಳಾಗಿರುವ ಗಂಗೇನಹಳ್ಳಿ, ವರ್ತೂರು, ವರ್ತೂರು ನರಸೀಪುರ ಮತ್ತು ಪೆದ್ದನಪಾಳ್ಯ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಬೆಲೆಯಿದೆ.
ಈ ಪ್ರದೇಶಗಳಲ್ಲಿನ ನೆಲದ ಬೆಲೆ ಚದರ ಅಡಿಯೊಂದಕ್ಕೆ ಕೇವಲ 2,100/- ಎಂದೇ ಲೆಕ್ಕ ಹಾಕಿದರೂ ಸಹ ಎಕರೆಯೊಂದಕ್ಕೆ 9,14,76,000 ಗಳಾಗುತ್ತದೆ. ಒಟ್ಟು 1,110 ಎಕರೆ ವಿಸ್ತೀರ್ಣದ ಪ್ರದೇಶಕ್ಕೆ ಸುಮಾರು 10,153,83,60,000 ಗಳಾಷ್ಟಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಗ್ರಾಮಸ್ಥರಲ್ಲದ ಜನರಿಗೆ ಮತ್ತು ಆಯಾ ಗ್ರಾಮಗಳ ಸರ್ಕಾರಿ ಜಮೀನುಗಳಲ್ಲಿ ವ್ಯವಸಾಯ ಮಾಡುವ ಬಗ್ಗೆ ಸಾಗುವಳಿ ಚೀಟಿ ಹೊಂದಿಲ್ಲದ ಜನರಿಗೆ ಯಾವುದೇ ಕಾರಣಕ್ಕೂ ಸರ್ಕಾರೀ ಜಮೀನುಗಳನ್ನು ಹಂಚಿಕೆ ಮಾಡಬಾರದು ಎಂಬ ನಿಯಮವಿದ್ದರೂ ಈ ನಾಲ್ಕು ಗ್ರಾಮಗಳ ಸರ್ಕಾರಿ ಜಮೀನುಗಳನ್ನು ಉತ್ತರ ಭಾರತೀಯರಿಗೆ ನೀಡಲಾಗಿದೆ.
ಈ ಎಲ್ಲರೂ ಡಿಎಲ್‌ಎಫ್ ಸಂಸ್ಥೆಯ ನಿರ್ದೇಶಕರು ಮತ್ತು ಸದಸ್ಯರುಗಳಾಗಿರುವುದೂ ಸಹ ಧೃಢಪಡುತ್ತದೆ. ಇವರುಗಳಲ್ಲದೇ, ತಮ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲವು ಸ್ಥಳೀಯರ ಹೆಸರುಗಳಲ್ಲಿಯೂ ಸಹ ನಕಲಿ ದಾಖಲೆಗಳನ್ನು ಸಂಸ್ಥೆಯವರು ಮಾಡಿಸಿದ್ದಾರೆ. 2013 ರಿಂದ 2018 ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿರುವ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ದಕ್ಷಿಣ ತಾಲ್ಲೂಕು ತಹಸೀಲ್ದಾರ್‌ಗಳು, ಉಪ ತಹಸೀಲ್ದಾರ್‌ಗಳು, ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರು ಡಿಎಲ್‌ಎಫ್ ಸಂಸ್ಥೆಗೆ ಖಾತಾಗಳನ್ನು ಮಾಡಿಕೊಟ್ಟಿದ್ದಾರೆ.
ಇದೀಗ ಸಂಸ್ಥೆಯವರು ನ್ಯಾಯಾಲಯದ ಮೂಲಕ ಪ್ರತಿವಾದಿಗಳಿಲ್ಲದ ಸನ್ನಿವೇಶವನ್ನು ಸೃಷ್ಟಿಸಿ, ಇಡೀ ಸ್ವತ್ತಿಗೆ ಆದೇಶವನ್ನು ಪಡೆದುಕೊಳ್ಳಲು ದೊಡ್ಡ ಸಂಚನ್ನು ರೂಪಿಸಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಮೇಶ್ ಮನವಿ ಮಾಡಿಕೊಂಡಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ 10,000 ಕೋಟಿ ರೂ. ಗಳಿಗಿಂತಲೂ ಹೆಚ್ಚು ಬೆಲೆಬಾಳುವ 1,100 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ರಾಬರ್ಟ್ ವಾದ್ರಾ ಸೇರಿದಂತೆ ಸಂಸ್ಥೆಯ ಮುಖ್ಯಸ್ಥರು, ನಿರ್ದೇಶಕರು, ಸದಸ್ಯರು ಮತ್ತು ಪಾಲುದಾರರು ಹಾಗೂ ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮೂಲ್ಯ ಸರ್ಕಾರಿ ಸ್ವತ್ತುಗಳನ್ನು ಸರ್ಕಾರೀ ನೆಲಗಳ್ಳರಿಂದ ರಕ್ಷಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ 487 ಪುಟಗಳ ಸಂಪೂರ್ಣ ದಾಖಲೆಗಳನ್ನು ನೀಡಿದ್ದಾರೆ.