ನವದೆಹಲಿ,ಏ.12- ಕರ್ನಾಟಕದ ರಾಜಧಾನಿ ಬೆಂಗಳೂರಿನ ಎಚ್‍ಎಲ್‍ನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಪ್ರಮುಖ ರೂವಾರಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗದಲ್ಲಿ ತೀರ್ಥಹಳ್ಳಿ ತಾಲ್ಲೂಕಿನವರಾದ ಮುಸಾವೀರ್ ಹುಸೇನ್ ಶಬೀರ್ ಹಾಗೂ ಅಬ್ದುಲ್ ಮತೀನ್ ಎಂಬುವರನ್ನು ಎನ್‍ಐಎ ಅಧಿಕಾರಿಗಳು ಪಶ್ಚಿಮಬಂಗಾಳದಲ್ಲಿ ಬಂಧಿಸಿದ್ದಾರೆ.
ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಎನ್‍ಐಎ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಖಚಿತ ಸುಳಿವಿನ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಉಗ್ರ ಎಡೆಮುರಿ ಕಟ್ಟಿದ್ದಾರೆ.ಇಬ್ಬರು ಐಸಿಸ್ ಉಗ್ರ ಸಂಘಟನೆಯ ಪರ ಒಲವು ಹೊಂದಿದ್ದು, ವಿಶೇಷವಾಗಿ ದಕ್ಷಿಣ ಭಾಗದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದು ಹಾಗೂ ಈ ಸಂಘದ ಮೇಲೆ ವಿದ್ಯಾವಂತ ಯುವಕರನ್ನು ಸೆಳೆಯುವ ಕಾರ್ಯದಲ್ಲಿ ಹಲವು ವರ್ಷಗಳಿಂದ ನಿರತರಾಗಿದ್ದರು.
ಎನ್‍ಐಎ ಮೂಲಗಳ ಪ್ರಕಾರ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಮೋಸ್ಟ್ ವಾಂಟೆಡ್, ಶಂಕಿತ ಉಗ್ರರಾದ ಮುಸ್ಸಾವೀರ್, ಅಬ್ದುಲ್ ಮತೀನ್ ಹಲವು ವರ್ಷಗಳಿಂದ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ತಮಿಳುನಾಡು, ಮಹಾರಾಷ್ಟ್ರದಲ್ಲಿಯೂ ಸಕ್ರಿಯರಾಗಿದ್ದರು ಎಂಬ ವಿಚಾರ ಎನ್‍ಐಎ ತನಿಖೆಯಿಂದ ಗೊತ್ತಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್, ಮುಸ್ಸಾವಿರ್ ಮೊದಲಿನಿಂದಲೂ ಉಗ್ರ ತತ್ವದ ಒಲವು ಹೊಂದಿದ್ದರು.
ಜನವರಿ ಮತ್ತು ಫೆಬ್ರವರಿಯಲ್ಲಿ ಚೆನ್ನೈನಲ್ಲಿ ತಂಗಿದ್ದ ಮುಸಾವೀರ್ ಹುಸೇನ್ ಶಜೀಬ್ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆಸಿದ್ದಾನೆ ಎನ್ನಲಾಗಿದೆ. ಈತ ಮಾಸ್ಟರ್ ಮೈಂಡ್ ಕೂಡ ಆಗಿರಬಹುದು ಎಂಬ ಬಗ್ಗೆಯೂ ಎನ್‍ಐಎ ತನಿಖೆ ನಡೆಸುತ್ತಿತ್ತು. ಈತನ ಜೊತೆ ಅಬ್ದುಲ್ ಮತೀನ್ ತಹಾ ಕೂಡ ಇದ್ದ ಎಂಬುದು ಗೊತ್ತಾಗಿದೆ. ಈ ಇಬ್ಬರು ಕೂಡ ಅಲ್ ಹಿಂದ್ ಮಾಡ್ಯೂಲ್ ಕೇಸ್‍ನಲ್ಲಿ ಎನ್‍ಐಎಗೆ ಬೇಕಾಗಿದ್ದು, 2020ರಿಂದಲೂ ತಲೆಮರೆಸಿಕೊಂಡಿದ್ದಾರೆ.
ಕಳೆದ ಮಾ.1ರಂದು ನಡೆದ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎನ್‍ಐಎ ಅಧಿಕಾರಿಗಳು ಪ್ರಮುಖ ಆರೋಪಿ ಮುಸಾವೀರ್ ಶಬೀರ್‍ನನ್ನು ಬಂಧಿಸಿತ್ತು.ಚಿಕ್ಕಮಗಳೂರು ದುಬೈನಗರದ ಮುಜಮೀಲ್, ಕೆಫೆಯಲ್ಲಿ ಬಾಂಬ್ ಇರಿಸಿದ್ದ ಶಂಕಿತ ಹಾಗೂ ಇತರರ ಜೊತೆ ಸೇರಿ ಸಂಚು ರೂಪಿಸಿದ್ದ. ಕೆಲ ಪುರಾವೆಗಳನ್ನು ಆಧರಿಸಿ ಮುಜಮೀಲ್‍ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಈತನೇ ಪ್ರಮುಖ ಸಂಚುಕೋರ ಎಂಬುದು ಗೊತ್ತಾಗಿತ್ತು.
18 ಸ್ಥಳಗಳ ಮೇಲೆ ದಾಳಿ:
ಬಾಂಬ್ ಇರಿಸಲು ಸಜ್ಜಾಗಿದ್ದ ಮುಸಾವೀರ್, ತಾಹಾಗೆ ಅಗತ್ಯವಿದ್ದ ಕಚ್ಚಾ ಸಾಮಗ್ರಿ ಹಾಗೂ ಇತರೆ ವಸ್ತುಗಳನ್ನು ಮುಜಮೀಲ್ ಪೂರೈಸಿದ್ದ. ರಾಮೇಶ್ವರಂ ಕೆಫೆ ಸ್ಥಳಕ್ಕೆ ತಲುಪಲು ಹಾಗೂ ಅಲ್ಲಿಂದ ಪರಾರಿಯಾಗುವ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆಗೂ ಅನುಕೂಲ ಕಲ್ಪಿಸಿದ್ದ. ಮುಜಮೀಲ್ ಸಹಾಯದಿಂದಲೇ ಮುಸಾವೀರ್, ಕೆಫೆಯಲ್ಲಿ ಬಾಂಬ್ ಇರಿಸಿ ಪರಾರಿಯಾಗಿದ್ದ ಎಂದು ಎನ್‍ಐಎ ಮೂಲಗಳು ಹೇಳಿವೆ.
ಸ್ಪೋಟದಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಗಿತ್ತು.ಮುಜಮೀಲ್, ಮುಸಾವೀರ್, ಅಬ್ದುಲ್ ಮತೀನ್ ತಾಹಾ ಮನೆಗಳು ಹಾಗೂ ಅಂಗಡಿಗಳಲ್ಲಿ ಶೋಧ ನಡೆಸಲಾಯಿತು. ದಾಳಿ ಸಂದರ್ಭದಲ್ಲೇ ಮುಜಮೀಲ್ ಸಿಕ್ಕಿಬಿದ್ದಿದ್ದ.
ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯದಲ್ಲಿರುವ ಶಂಕಿತರು, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇದೊಂದು ದೊಡ್ಡ ಸಂಚು. ಇದರ ಹಿಂದಿರುವ ಪ್ರತಿಯೊಬ್ಬರನ್ನು ಪತ್ತೆ ಮಾಡಲು ತನಿಖೆ ಮುಂದುವರಿದಿದೆ¿ ಎಂದು ಮೂಲಗಳು ತಿಳಿಸಿವೆ.
ಯಾರು ಈ ಮುಸಾವೀರ್ ಹುಸೇನ್?:
ಮುಸಾವೀರ್ ಹುಸೇನ್ ಶಜೀಬ್ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನವನು. ಶಿವಮೊಗ್ಗ ಐಸಿಸ್ ಮಾಡ್ಯೂಲ್‍ನ ಭಾಗವಾಗಿದ್ದ ಈತ ಎನ್‍ಐಎಗೆ ಈ ಹಿಂದೆಯೇ ಬೇಕಾಗಿದ್ದ. 2020ರ ಅಲ್ ಹಿಂದ್ ಮಾಡ್ಯೂಲ್ ಕೇಸ್‍ನಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಎನ್‍ಐಎ ವಾರೆಂಟ್ ಪಟ್ಟಿಯಲ್ಲಿ ಈತನ ಹೆಸರಿದೆ. ಎ-17 ಆಗಿದ್ದು, ತಲೆಮರೆಸಿಕೊಂಡಿದ್ದಾನೆ. ಕೊನೆಯದಾಗಿ ಬೆಂಗಳೂರು ಸ್ಪೋಟ ಪ್ರಕರಣದ ಬಳಿಕ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಈತನ ಜಾಡು ಕಂಡುಬಂದಿದೆ. ಬೆಂಗಳೂರಿನಲ್ಲಿ ರೆಡಿಮೆಡ್ ಗಾರ್ಮೆಂಟ್ಸ್ ವ್ಯವಹಾರವನ್ನು ಮುಸಾವೀರ್ ನಡೆಸುತ್ತಿದ್ದ. ಆದರೆ 2019ರಿಂದ ನಾಪತ್ತೆಯಾಗಿದ್ದಾನೆ ಎಂದು ಅವರ ತಾಯಿ ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅಲ್ ಹಿಂದ್‍ನ ಸಕ್ರಿಯ ಸದಸ್ಯ!
ಐಸಿಸ್‍ನಿಂದ ಪ್ರೇರೆಪಿತವಾಗಿ ಕಟ್ಟಿದ್ದ ಭಯೋತ್ಪಾದಕ ಸಂಘಟನೆ ಅಲ್ ಹಿಂದ್‍ನ ಸಕ್ರಿಯ ಸದಸ್ಯನಾಗಿ ಮುಸಾವೀರ್ ಹುಸೇನ್ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಏನಿದು ಅಲ್ ಹಿಂದ್?
ಐಸಿಸ್ ಪ್ರೇರೆಪಿತ ಅಲ್ ಹಿಂದ್ ಮಾಡ್ಯೂಲ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು. ದಕ್ಷಿಣ ಭಾರತದ ಮುಸ್ಲಿಂ ಯುವಕರನ್ನು ಸೇರಿಸಿಕೊಂಡು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಮುಂದಾಗಿದ್ದರು. ಬೆಂಗಳೂರನ್ನೇ ಮೂಲವಾಗಿಟ್ಟುಕೊಂಡು ಕರ್ನಾಟಕ, ತಮಿಳುನಾಡಿನ ಹಲವೆಡೆ ಏ.2019ರಿಂದಲೂ ಸಭೆ ನಡೆಸಿ, ದೇಶದಲ್ಲಿ ವಿಧ್ವಂಶಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು.
ಅಬ್ದುಲ್ ಮತೀನ್ ಐಸಿಸ್ ಉಗ್ರರ ಜತೆ ಸಂಪರ್ಕ ಹೊಂದಿದ್ದ ಶಂಕೆಯಿದೆ. ಆನ್‍ಲೈನ್ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದ್ದ ಉಗ್ರನನ್ನು ಅಲ್ ಹಿಂದ್ ಮುಖ್ಯಸ್ಥ ಮೆಹಬೂಬ್ ಪಾಷಾ ಜತೆ ಸಂಪರ್ಕ ಸಾಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಚಾರವೂ ಅಲ್ ಹಿಂದ್ ಕೇಸ್ ತನಿಖೆಯಲ್ಲಿ ಗೊತ್ತಾಗಿತ್ತು. 2020ರಲ್ಲಿ ಅಲ್ ಹಿಂದ್ ಸಂಘಟನೆಯ ಸಂಚು ವಿಫಲಗೊಂಡು ಮೊಹಮದ್ ಪಾಷಾ ಸೇರಿ 18 ಮಂದಿ ಬಂಧನವಾಗುತ್ತಿದ್ದಂತೆಯೇ ಮತೀನ್, ಮುಸಾವೀರ್ ತಲೆಮರೆಸಿಕೊಂಡಿದ್ದರು.