Sunday, July 7, 2024
Homeರಾಜ್ಯರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿದಂತೆ ದೇಶದ 11 ಕಡೆ ಎನ್‌ಐಎ ದಾಳಿ

ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿದಂತೆ ದೇಶದ 11 ಕಡೆ ಎನ್‌ಐಎ ದಾಳಿ

ಬೆಂಗಳೂರು,ಮೇ21-ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಪೋಟ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ಅಧಿಕಾರಿಗಳು ಬೆಂಗಳೂರು ಹಾಗೂ ಕೋಯಮತ್ತೂರು ಸೇರಿದಂತೆ ದೇಶದ 11 ಕಡೆಗಳಲ್ಲಿ ದಾಳಿ ಮಾಡಿದ್ದಾರೆ.

ಇದೇ ವೇಳೆ ಎನ್‌ಐಎ ಅಧಿಕಾರಿಗಳು ಕೊತ್ತಮತ್ತೂರಿನ ನಾರಾಯಣಗುರು ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ವಶದಲ್ಲಿರುವ ಶಂಕಿತ ಉಗ್ರರಾದ ಮತೀನ್‌ ಹಾಗೂ ಶಾಹೀಬ್‌ಗೆ ಇಬ್ಬರು ವೈದ್ಯರು ಹಣ ಸಂದಾಯ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಗಿದೆ.

ತನಿಖಾ ಸಂದರ್ಭದಲ್ಲಿ ಕರ್ನಾಟಕ ಮೂಲದ ಇಬ್ಬರು ವೈದ್ಯರು, ಶಂಕಿತ ಉಗ್ರರಿಗೆ ಹಣವನ್ನು ಖಾತೆಗೆ ಜಮೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಹೀಗಾಗಿ ಯಾವ ಕಾರಣಕ್ಕಾಗಿ ವೈದ್ಯರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಬ್ಬರು ಶಂಕಿತರೊಂದಿಗೆ ಸಂಪರ್ಕ ಹೊಂದಿದ ನಾಲ್ಕು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ಎನ್‌‍ಐಎ ಅಧಿಕಾರಿಗಳು ಬೆಂಗಳೂರಿನ ಕುಮಾರಸ್ವಾಮಿಲೇಔಟ್‌ ಮತ್ತು ಬನಶಂಕರಿಯಲ್ಲಿ ದಾಳಿ ಮಾಡಿದ್ದಾರೆ. ಎನ್‌‍ಐಎ ಕೊಯಮತ್ತೂರಿನ ವೈದ್ಯರಾದ ಜಾಫರ್‌ ಇಕ್ಬಾಲ್‌ ಮತ್ತು ನಯನ್‌ ಸಾದಿಕ್‌ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎನ್‌ಐಎ ಉನ್ನತ ಮೂಲಗಳು ತಿಳಿಸಿವೆ.

ಶಂಕಿತ ಉಗ್ರ ಮತೀನ್‌ ಬೆಂಗಳೂರಿಗೆ ಬಂದಾಗ ಸಹಾಯ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಆತನೊಂದಿಗೆ ಸಂಪರ್ಕಕ್ಕೆ ಬಂದಿದ್ದವರ ಮನೆ ಹಾಗೂ ವಾಸಸ್ಥಳದ ಮೇಲೆ ದಾಳಿ ಮಾಡಲಾಗಿದೆ.

ಮಾ.1ರಂದು ಬೆಂಗಳೂರಿನ ಐಟಿಪಿಎಲ್‌ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ ಒಟ್ಟು 9 ಜನ ಗಾಯಗೊಂಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ, ಏಪ್ರಿಲ್‌ 12ರಂದು ಪಶ್ಚಿಮಬಂಗಾಳದ ಮೇದಿನಿಪುರದಲ್ಲಿ ಅಡಗಿದ್ದ ಪ್ರಮುಖ ಆರೋಪಿಗಳಾದ ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವಿರ್‌ ಹುಸೇನ್‌ ಶಾಜೀಬ್‌‍ನನ್ನು ಬಂಧಿಸಿತ್ತು.

ಮುಂದುವರೆದ ತನಿಖೆಯಲ್ಲಿ ಆರೋಪಿಗಳಿಂದ ಮತ್ತಷ್ಟು ಸ್ಫೋಟಕ ಅಂಶಗಳು ಹೊರಬಂದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ. ತನಿಖೆಯ ನೇತೃತ್ವ ವಹಿಸಿರುವ ಎನ್‌ಐಎ ಘಟನೆ ನಡೆದ 43 ದಿನಗಳ ಬಳಿಕ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇವರ ಬಂಧನಕ್ಕೂ ಮುನ್ನ ಪ್ರಮುಖ ಆರೋಪಿಗಳಿಗೆ ಲಾಜಿಸ್ಟಿಕ್‌ ಬೆಂಬಲ ನೀಡಿದ ಆರೋಪದಡಿ ಚಿಕ್ಕಮಗಳೂರಿನ ಕಳಸ ಮೂಲದ ಮುಜಾಮಿಲ್‌ ಶರೀಫ್‌ ಎಂಬಾತನನ್ನು ಮಾರ್ಚ್‌ 26ರಂದು ಬಂಧಿಸಿತ್ತು.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಹಚ್ಚುವ ಮತ್ತು ಬಂಧಿಸುವ ಪ್ರಯತ್ನಗಳ ಭಾಗವಾಗಿ ಮಾರ್ಚ್‌ 29ರಂದು ಕರ್ನಾಟಕ, ತಮಿಳುನಾಡು ಮತ್ತು ಉತ್ತರಪ್ರದೇಶದ 18 ಸ್ಥಳಗಳಲ್ಲಿ ಎನ್‌‍ಐಎ ತಂಡಗಳು ಶೋಧ ನಡೆಸಿದ್ದವು. ಇದಲ್ಲದೇ ಆರೋಪಿಗಳ ಬಂಧನಕ್ಕೆ ಸಹಾಯಕಾರಿಯಾಗಬಲ್ಲ ಮಾಹಿತಿ ನೀಡಿದವರಿಗೆ ತಲಾ ಹತ್ತು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಈ ಘಟನೆಯ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ತಾಹ ಹಾಗೂ ಬಾಂಬ್‌ ಇರಿಸಿದ್ದ ಮುಸಾವಿರ್‌ ಹುಸೇನ್‌ ಶಾಜಿಬ್‌ನನ್ನು ಎನ್‌ಐಎ ಬಂಧಿಸಿದೆ. ಬೆಂಗಳೂರಿನ ಕುಂದಲಹಳ್ಳಿ ಬಾಂಬ್‌ ಸ್ಪೋಟಿಸಿ ಕೋಲ್ಕತ್ತಾದಲ್ಲಿ ಇವರು ತಲೆಮರೆಸಿಕೊಂಡಿದ್ದರು. ಬಂಧನದಿಂದ ಬಚಾವಾಗಲು ಬೇರೆ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಂಡು ಅಡಗಿಕೊಂಡಿದ್ದರು ಎಂಬ ಮಾಹಿತಿ ಪತ್ತೆಯಾಗಿತ್ತು.

ಅಬ್ದುಲ್‌ ಮತೀನ್‌ ತಾಹ, ಯಶ್‌ ಶಹನವಾಜ್‌ ಪಟೇಲ್‌ ಆಧಾರ್‌ಕಾರ್ಡ್‌ ಸೃಷ್ಟಿಸಿಕೊಂಡಿದ್ದರೆ, ಮುಸಾವಿರ್‌ ಹುಸೇನ್‌ ಶಾಜಿಬ್‌‍, ಅನೋಲ್‌ ಕುಲಕರ್ಣಿ ಎನ್ನುವ ಹಿಂದು ಹೆಸರಲ್ಲಿ ಆಧಾರ್‌ ಕಾರ್ಡ್‌ ರಚಿಸಿಕೊಂಡಿದ್ದರು. ಇಬ್ಬರೂ ಕೂಡ ಇದೇ ದಾಖಲೆಯಲ್ಲಿಯೇ ಕೋಲ್ಕತ್ತಾದ ಪ್ಯಾರಡೈಸ್‌‍ ಹೋಟೆಲ್‌ಗೆ ದಾಖಲೆ ನೀಡಿ ವಾಸ್ತವ್ಯ ಹೂಡಿದ್ದರು.

ದಾಳಿ ವೇಳೆ ನಕಲಿ ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದಾಗ ಈ ಮಾಹಿತಿ ಪತ್ತೆಯಾಗಿದೆ. ನಕಲಿ ದಾಖಲೆಗಳನ್ನು ಎನ್‌‍ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಲ್ಲದೇ, ಉಗ್ರರು ತಲೆಮರೆಸಿಕೊಂಡಿದ್ದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಇಬ್ಬರೂ ಉಗ್ರರು ಕೂಡ ತಪ್ಪಿಸಿಕೊಳ್ಳುವುದರಲ್ಲಿ ಮಾಸ್ಟರ್‌ ಮೈಂಡ್‌ ಆಗಿದ್ದರು. ಪಕ್ಕಾ ಚಾಲಾಕಿತನದಿಂದಲೇ ಕೋಲ್ಕತದಲ್ಲಿ ಇವರು ತಪ್ಪಿಸಿಕೊಳ್ಳುತ್ತಿದ್ದರು. 12 ದಿನ ಕೋಲ್ಕತ್ತದಲ್ಲಿದ್ದ ಇವರು, ಮೂರು ನಾಲ್ಕು ದಿನಕ್ಕೆ ಸ್ಥಳ ಬದಲಾಯಿಸುತ್ತಿದ್ದರು. ಆದರೆ ಮುಸಾವಿರ್‌ ಹಾಗೂ ಮತೀನ್‌ ತಾಹ ಹೆಜ್ಜೆ ಗುರುತನ್ನು ಪತ್ತೆ ಹಚ್ಚುವಲ್ಲಿ ಎನ್‌‍ಐಎ ಯಶಸ್ವಿಯಾಗಿತ್ತು.

RELATED ARTICLES

Latest News