ಬೆಂಗಳೂರು,ಮಾ.6- ಬೆಂಗಳೂರು ರಾಮೇಶ್ವರಂ ಕೆಫೆ ಸೋಟ ಪ್ರಕರಣದಲ್ಲಿ ಪೊಲೀಸರ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಹೀಗೇ ಮುಂದುವರೆದರೆ ಶೀಘ್ರವೇ ಪ್ರಕರಣ ಭೇದಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬಹುತೇಕ ಆರೋಪಿಯನ್ನು ಪತ್ತೆ ಹಚ್ಚುವ ಸನಿಹದಲ್ಲಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳು ತಮಗೆ ನೀಡಿರುವ ಮಾಹಿತಿ ಪ್ರಕಾರ ಮಹತ್ವದ ಮಾಹಿತಿಗಳು ಸಿಕ್ಕಿವೆ. ಹೊಸ ಹೊಸ ವಿಚಾರಗಳು ದೊರೆತಿವೆ. ಈವರೆಗೂ ಯಾರನ್ನೂ ಬಂಧಿಸಿಲ್ಲ. ಅನುಮಾನ ಬಂದವರನ್ನು ಕರೆತಂದು ಹೇಳಿಕೆ ಪಡೆಯುವುದು, ಮಾಹಿತಿ ಪಡೆಯುವುದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ತನಿಖಾ ದಳ ಈವರೆಗೂ ಅಕೃತವಾಗಿ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡಿಲ್ಲ. ನಿನ್ನೆ ಬೆಂಗಳೂರಿಗೆ ಬಂದು ತನಿಖೆಯ ಹೊಣೆಗಾರಿಕೆ ತೆಗೆದುಕೊಳ್ಳಬೇಕಿತ್ತು. ಆದರೆ ಎನ್ಐಎ ಅಧಿಕಾರಿಗಳು ಬಂದಿಲ್ಲ. ಅವರು ಬಂದು ಅಕೃತವಾಗಿ ಮಾಹಿತಿ ಪಡೆದು ತನಿಖೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಇದುವರೆಗೂ ಆ ರೀತಿ ಆಗಿಲ್ಲ. ಬಹುಶಃ ಇಂದು ಬರಬಹುದು. ಅವರು ಎಷ್ಟು ಜನರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ತಮಗೆ ಇಲ್ಲ ಎಂದರು.
ಪಾಕಿಸ್ತಾನ ಪರವಾಗಿ ವಿಧಾನಸಭೆಯಲ್ಲಿ ಘೋಷಣೆ ಕೂಗಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗಿದೆ. ತನಿಖೆ ಅಗತ್ಯವಿದ್ದು, ಈ ಹಂತದಲ್ಲಿ ಹೆಚ್ಚಿನ ಚರ್ಚೆ ನಡೆಸುವುದು ಸೂಕ್ತವಲ್ಲ. ರಾಜ್ಯಸಭಾ ಸಮಿತಿ ಸದಸ್ಯ ನಾಸಿರ್ ಹುಸೇನ್ ಜೊತೆ ರೌಡಿಯೊಬ್ಬ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿರುವ ಬಗ್ಗೆ ಚರ್ಚೆ ಅಪ್ರಸ್ತುತ. ಪಾಕಿಸ್ತಾನದ ಪರ ಘೋಷಣೆಗೆ ಸಂಬಂಧಪಟ್ಟಂತೆ ಸರ್ಕಾರ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಂಡಿದೆ. ಬಿಜೆಪಿಯವರು ಯಾವುದೇ ಟೀಕೆ ಮಾಡಲಿ, ದೂರು ಕೊಡಲಿ, ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಗೆಲುವೇ ಮಾನದಂಡ :
ಲೋಕಸಭಾ ಚುನಾವಣೆಯಲ್ಲಿ ಗೆಲುವೇ ಮಾನದಂಡವಾಗಿದೆ. ಹೀಗಾಗಿ ಗೆಲ್ಲುವವರಿಗೆ ಟಿಕೆಟ್ ನೀಡಲಾಗುವುದು. ಪಕ್ಷದ ವತಿಯಿಂದ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ನಮ್ಮಿಂದಲೂ ಮಾಹಿತಿ ಕಲೆ ಹಾಕಿದೆ. ಕಾರ್ಯಕರ್ತರ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ ಎಂದರು.
ಕುಟುಂಬ ರಾಜಕಾರಣ, ಬೇರೆ ಬೇರೆ ವಿಚಾರಗಳ ಚರ್ಚೆ ಸದ್ಯಕ್ಕೆ ಅಪ್ರಸ್ತುತ. ಸದ್ಯಕ್ಕೆ ನಾವು ಗೆಲ್ಲಬೇಕು, ಅಷ್ಟೇ ಮುಖ್ಯ. ಉಳಿದ ಎಲ್ಲಾ ವಿಚಾರಗಳು ಅನಂತರ ಚರ್ಚೆಯಾಗುತ್ತವೆ. ನಾಳೆ ಕೇಂದ್ರ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈವರೆಗೂ 2 ಸ್ಕ್ರೀನಿಂಗ್ ಕಮಿಟಿ ಸಭೆಗಳು ನಡೆದಿವೆ. ಅದರಲ್ಲಿ ಬಹುತೇಕ ಒಂದೊಂದು ಕ್ಷೇತ್ರಕ್ಕೆ ಒಂದೊಂದೇ ಹೆಸರನ್ನು ನಿರ್ಣಯಿಸಲಾಗಿದೆ. ನಾಳೆ ನಡೆಯುವ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬಹುತೇಕ ವಾರ, ಹತ್ತು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗುವ ಸಾಧ್ಯತೆಯಿದೆ. ಅದನ್ನು ಪಕ್ಷದ ಅಧ್ಯಕ್ಷರು ಖಚಿತಪಡಿಸುತ್ತಾರೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಒಮ್ಮೆಲೇ ಅಭ್ಯರ್ಥಿಗಳ ಆಯ್ಕೆಯಾಗುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಯಲ್ಲಿ ಆಯಾ ಉಸ್ತುವಾರಿ ಸಚಿವರು, ಶಾಸಕರು, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಸೂಚನೆ ನೀಡಿದ್ದಾರೆ. ಪಕ್ಷದ ರಾಜ್ಯದ ನಾಯಕರು ಕೂಡ ಇದೇ ರೀತಿಯ ತಾಕೀತು ಮಾಡಿದ್ದಾರೆ ಎಂದು ಹೇಳಿದರು.