ಬೆಂಗಳೂರು,ಮಾ.9- ಬಾಂಬ್ ಸ್ಪೋಟ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆ ಇಂದಿನಿಂದ ಪ್ರಾರಂಭಗೊಂಡಿದ್ದು, ಎಂದಿನಂತೆ ಗ್ರಾಹಕರು ತುಂಬಿ ತುಳುಕುತ್ತಿದ್ದರು. ಬೆಳಿಗ್ಗೆಯಿಂದಲೇ ಜನ ಕೆಫೆಗೆ ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದರು. ಹೆಚ್ಚಿನ ಭದ್ರತೆಗಾಗಿ ಕೆಫೆಯಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಕೆಫೆಗೆ ಬರುವ ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಒಳಬಿಡಲಾಗುತ್ತಿತ್ತು.
ಕಳೆದ ವಾರವಷ್ಟೇ ಇಲ್ಲಿ ಬಾಂಬ್ ಸ್ಪೋಟಗೊಂಡು ಹಲವರು ಗಾಯಗೊಂಡು, ಆತಂಕದ ವಾತಾವರಣ ಉಂಟಾಗಿತ್ತಾದರೂ ಆಗಮಿಸುತ್ತಿರುವ ಗ್ರಾಹಕರಲ್ಲಿ ಯಾವುದೇ ಆತಂಕ ಇರಲಿಲ್ಲ.ಮಾಜಿ ಸೈನಿಕರನ್ನು ಭದ್ರತೆಗೆ ನೇಮಿಸಲಾಗಿತ್ತು. ಖುದ್ದು ಹೋಟೆಲ್ ಮಾಲಿಕರು ಮುಂದೆ ನಿಂತು ಸಿಬ್ಬಂದಿಯನ್ನು ಹುರಿದುಂಬಿಸುತ್ತಿದ್ದರು. ಗ್ರಾಹಕರನ್ನು ಬರಮಾಡಿಕೊಳ್ಳುತ್ತಿದ್ದುದು ಕಂಡುಬಂದಿತು.
ಬಾಂಬ್ ಸ್ಪೋಟಗೊಂಡು ಕೆಫೆಯಲ್ಲಿ ಹಲವು ವಸ್ತುಗಳು ಹಾನಿಗೊಳಗಾಗಿದ್ದವು. ಕಳೆದ ವಾರದಿಂದ ಎಲ್ಲವನ್ನೂ ಸರಿಪಡಿಸಿ ನಿನ್ನೆಯಷ್ಟೇ ಹೋಮ, ಪೂಜೆ ಮಾಡಿ ಪುನರ್ ಆರಂಭಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಿಗ್ಗೆಯಿಂದ ಕೆಫೆ ಪ್ರಾರಂಭವಾಗಿದ್ದು, ನಿರಾತಂಕವಾಗಿ ಗ್ರಾಹಕರು ಬಂದು ಹೋಗುತ್ತಿದ್ದಾರೆ.