ಬೆಂಗಳೂರು,ಫೆ.3- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಅವರು ಪ್ರತ್ಯೇಕವಾಗಿ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೈ ಸಂಪೂರ್ಣ ಕುಸಿದು ಬಿದ್ದಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ನಡೆದಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ ಅತ್ಯಂತ ಹೇಯ ಹಾಗೂ ಪೈಶಾಚಿಕ ಮನಸ್ಥಿತಿಯ ವಿಕೃತರ ಅಟ್ಟಹಾಸದ ಪರಮಾವಧಿಯಾಗಿದೆ. ಈ ಘಟನೆಯು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಇದರ ಲಾಭ ಪಡೆಯುತ್ತಿರುವ ಸಮಾಜಘಾತುಕ ದುಷ್ಕರ್ಮಿಗಳು ಅಪ್ರಾಪ್ತರ ಮೇಲೆ ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ, ಹಾಗೂ ಹಾಡು ಹಗಲಲ್ಲೇ ದರೋಡೆಗಳು ಎಗ್ಗಿಲ್ಲದೇ ಮುಂದುವರೆಸಿವೆ, ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಜವಾಬ್ದಾರಿ ಹೊತ್ತ ಸಚಿವರೆಲ್ಲರೂ ಪವರ್ ಶೇರಿಂಗ್ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಪವರ್ ಪಾಲಿಟಿಕ್‌್ಸ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ವಾಗ್ದಳಿ ನಡೆಸಿದ್ದಾರೆ.
ಆಡಳಿತ ವ್ಯವಸ್ಥೆ ಅಸ್ಥಿರಗೊಳ್ಳುತ್ತಿರುವುದರ ಲಾಭ ಪಡೆಯುತ್ತಿರುವ ಅಧಿಕಾರಿಗಳಿಗೆ ಮೂಗುದಾರ ಹಾಕುವವರು ಇಲ್ಲವಾಗಿದೆ, ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕಾನೂನು ಸುವ್ಯವಸ್ಥೆಯ ರಕ್ಷಣೆ ದೊರೆಯದ ಅಮಾಯಕ ಜನ ಕಳ್ಳತನ, ದರೋಡೆ, ದೌರ್ಜನ್ಯ ಹಾಗೂ ಅತ್ಯಾಚಾರಗಳು ಎದುರಾಗುವ ಪರಿಸ್ಥಿತಿಯ ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ರೌರ್ಯದ ಪರಮಾವಧಿ ಮೆರದಿರುವ ಅಪ್ರಾಪ್ತ ಬಾಲಕಿಯನ್ನು ಕೇಂದ್ರೀಕರಿಸಿಕೊಂಡಿರುವುದರ ಸಾಕ್ಷಿಯಾಗಿ ಮಂಡ್ಯದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯು ಸೇರ್ಪಡೆಗೊಂಡಿದೆ. ಈ ಕೂಡಲೇ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸರ್ಕಾರ ಕಠಿಣ ಕ್ರಮ ಜರುಗಿಸದಿದ್ದರೆ ಕಾಂಗ್ರೆಸ್ ಸರ್ಕಾರ ಸಮಾಜ ಪೀಡಕ ದುಷ್ಟರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ತೀರ್ಮಾನಕ್ಕೆ ರಾಜ್ಯದ ಜನತೆ ಬರಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಗಂಭೀರವಾಗಿ ಪರಿಗಣಿಸಿ ಜನರ ನೆರವಿಗೆ ಧಾವಿಸಲು ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಆರ್ ಆಶೋಕ್, ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೃದಯವಿದ್ರಾವಕ ಘಟನೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅರಾಜಕತೆಗೆ ಮತ್ತೊಮೆ ಕನ್ನಡಿ ಹಿಡಿದಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ಮಹಿಳೆಯರ ಮೇಲೆ ಅತ್ಯಾಚಾರವಾದರೆ ಬಿಜೆಪಿ ಕಾಲದಲ್ಲಿ ರೇಪ್ ಆಗಿಲ್ಲವಾ ಎಂದು ಉಡಾಫೆ ಕೊಡುತ್ತೀರಲ್ಲಾ, ನಿಮ ಸರ್ಕಾರದ ಈ ಸಂವೇದನಾರಹಿತ ಧೋರಣೆ, ಅಲಕ್ಷ್ಯವೇ ಇವತ್ತಿನ ಅರಾಜಕತೆಗೆ ಕಾರಣ.ಆಕಸಿಕ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರೇ, 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆ ಮೂವರು ಕಾಮುಕರನ್ನು ಪತ್ತೆ ಹಚ್ಚಿ, ಬಂಧಿಸಿ, ಕಾನೂನಿನ ವಶಕ್ಕೆ ಒಪ್ಪಿಸಿ. ಮಹಿಳೆಯರ ಸುರಕ್ಷತೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಾಡಿನ ಹೆಣ್ಣುಮಕ್ಕಳಿಗೆ ನಿರ್ಭೀತಿಯಿಂದ ಓಡಾಡುವ ಗ್ಯಾರಂಟಿ ಕೊಡಿ ಎಂದು ಆಶೋಕ್ ಆಗ್ರಹಿಸಿದ್ದಾರೆ.