ಬೆಂಗಳೂರು,ಮೇ22– ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಬನಶಂಕರಿ 3ನೇ ಹಂತ, 5ನೇ ಕ್ರಾಸ್ ಚೌಡೇಶ್ವರಿ ನಿಲಯದಲ್ಲಿ ಸುಮಾರು 5 ವರ್ಷಗಳಿಂದ 33 ವರ್ಷದ ನಟಿ ವಾಸವಾಗಿದ್ದರು. ಇದೀಗ ನಾಗರಬಾವಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಾರೆ.
2018ರಲ್ಲಿ ಈ ನಟಿಗೆ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮಡೆನೂರು ಮನು ಪರಿಚಯವಾಗಿದ್ದು, ಇವರಿಬ್ಬರು ಸ್ನೇಹಿತರಾಗಿದ್ದಾರೆ. ಈ ನಡುವೆ ಮಡೆನೂರು ಮನುಗೆ ಈಗಾಗಲೇ ಮದುವೆಯಾಗಿದ್ದು ಒಂದು ಹೆಣ್ಣುಮಗು ಇದೆ.
2022, ನವಂಬರ್ 29ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಕಾರ್ಯಕ್ರಮದ ನಿಮಿತ್ತ ಮಡೆನೂರು ಮನು ಅವರು ನನ್ನನ್ನು ಹಾಗೂ ಇತರೆ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿದ್ದರು.
ಕಾರ್ಯಕ್ರಮ ಮುಗಿದ ನಂತರ ನಾನು ಶಿಕಾರಿಪುರದ ಹೋಟೆಲ್‌ನ ರೂಮ್‌ನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ಮಡೆನೂರು ಮನು ರೂಮಿಗೆ ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿ ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ 2022ರ ಡಿಸೆಂಬರ್ 3ರಂದು ನನ್ನ ವಿರೋಧದ ನಡುವೆಯೂ ನನಗೆ ತಾಳಿ ಕಟ್ಟಿದ್ದಾನೆ. ನಂತರದ ದಿನಗಳಲ್ಲಿ ನನ್ನ ಮನೆಗೆ ಬಂದು ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ. ನಾನು ಗರ್ಭಿಣಿಯಾಗಿರುವುದು ತಿಳಿದು ಮಾತ್ರೆ ನೀಡಿ ಎರಡು ಬಾರಿ ಗರ್ಭಪಾತ ಮಾಡಿಸಿದ್ದಾನೆ.
ನನ್ನ ಮೇಲೆ ಅತ್ಯಾಚಾರ ಮಾಡಿರುವ ಖಾಸಗಿ ವಿಡಿಯೋವನ್ನು ಆತನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಈತ ನಾಯಕ ನಟನಾಗಿ ಸಿನಿಮಾವೊಂದನ್ನು ಮಾಡಿದ್ದು, ಅದಕ್ಕಾಗಿ ನಾನು ಲಕ್ಷಾಂತರ ಹಣವನ್ನು ಆತನಿಗೆ ನೀಡಿದ್ದೇನೆ. ತನಗೆ ಮೋಸ ಮಾಡಿ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಮಡೆನೂರು ಮನು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.