Sunday, November 24, 2024
Homeರಾಜ್ಯಮಹಿಳಾಗೆ ಅತ್ಯಾಚಾರದ ಬೆದರಿಕೆ: 1.50 ಲಕ್ಷ ಸುಲಿಗೆ ಮಾಡಿದ್ದ ನಕಲಿ ಪೊಲೀಸ್ ಸೆರೆ

ಮಹಿಳಾಗೆ ಅತ್ಯಾಚಾರದ ಬೆದರಿಕೆ: 1.50 ಲಕ್ಷ ಸುಲಿಗೆ ಮಾಡಿದ್ದ ನಕಲಿ ಪೊಲೀಸ್ ಸೆರೆ

ಬೆಂಗಳೂರು,ಜು.22- ಮಹಿಳಾ ಥೆರಫಿಸ್ಟ್‍ಗೆ ತಾನೊಬ್ಬ ಪೊಲೀಸ್ ಎಂದು ಪರಿಚಯಿಸಿಕೊಂಡು ಹಣ ನೀಡದಿದ್ದರೆ ಅತ್ಯಾಚಾರವೆಸಗುವುದಾಗಿ ಹೆದರಿಸಿ 1.50 ಲಕ್ಷ ರೂ. ಪಡೆದು ಪರಾರಿಯಾಗಿದ್ದ ವಂಚಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರಕುಮಾರ್ (33) ಬಂಧಿತ ನಕಲಿ ಪೊಲೀಸ್. ಈತ ಸುರೇಶ ಎಂಬ ಹೆಸರಿನಲ್ಲಿ ಆನ್ಲೈನ್‍ನಲ್ಲಿ ಥೆರಪಿಗಾಗಿ ಪಶ್ಚಿಮ ಬಂಗಾಳ ಮೂಲದ 25 ವರ್ಷದ ಮಹಿಳಾ ಥೆರಫಿಸ್ಟಗೆ ಬುಕ್ ಮಾಡಿದ್ದನು.

ಥೆರಪಿಗಾಗಿ ರಾಮಮೂರ್ತಿ ನಗರದ ಅಪಾರ್ಟ್‍ಮೆಂಟ್ ಬಳಿ ರಾತ್ರಿ 10.30 ರ ಸುಮಾರಿನಲ್ಲಿ ಬಂದಿದ್ದಾಗ ಕಾರಿನಲ್ಲಿ ಆರೋಪಿ ಸ್ವಲ್ಪ ದೂರ ಕರೆದೊಯ್ದು ಬ್ಲಾಕ್‍ಮೇಲ್ ಮಾಡಿದ್ದಾರೆ. ತಾನೊಬ್ಬ ಪೊಲೀಸ್, 10 ಲಕ್ಷ ನೀಡದಿದ್ದರೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಆತನ ವರ್ತನೆಯಿಂದ ಭಯಗೊಂಡ ಮಹಿಳಾ ಥೆರಪಿಸ್ಟ್ ಸ್ನೇಹಿತರಿಗೆ ಕರೆ ಮಾಡಿ 1.50 ಲಕ್ಷ ರೂ.ವನ್ನು ಆರೋಪಿಗೆ ವರ್ಗಾವಣೆ ಮಾಡಿಸಿದ್ದಾರೆ.

ತದನಂತರ ರಾತ್ರಿಯಿಡೀ ಹೆಬ್ಬಾಳ ಸೇರಿದಂತೆ ಹಲವೆಡೆ ಕಾರಿನಲ್ಲಿ ಸುತ್ತಾಡಿಸಿ ಬೆಳಗಿನ ಜಾವ ಏರ್‍ಫೋರ್ಟ್ ಬಳಿ ಮಹಿಳಾ ಥೆರಫಿಸ್ಟ್‍ಗೆ ಇಳಿಸಿ ನೀನು ಊರಿಗೆ ಹಿಂದಿರುಗಬೇಕು, ಇಲ್ಲದಿದ್ದರೆ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ.
ವಂಚಕನ ಮಾತಿಗೆ ಹೆದರದೆ ಮಹಿಳಾ ಥೆರಫಿಸ್ಟ್ ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಕೈಗೊಂಡು ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ವಂಚಕ ಮಹೇಂದ್ರನನ್ನು ಬಂಧಿಸಿದ್ದಾರೆ.

ಆರೋಪಿ ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಈ ರೀತಿ ಹಣ ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದುದು ವಿಚಾರಣೆಯಿಂದ ಗೊತ್ತಾಗಿದೆ. ಈ ವಂಚಕ ಈ ಹಿಂದೆಯೂ ಇದೇ ರೀತಿ ಕೃತ್ಯವೆಸಗಿದ್ದು, ಈತನ ವಿರುದ್ಧ ಮಾರತಳ್ಳಿ, ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾರ್ಥಿನಿಯ ಅಪಹರಿಸಿದ್ದ ನಾಲ್ವರಿಗೆ ನೋಟಿಸ್..
ಬೆಂಗಳೂರು,ಜು.22- ಬಸ್‍ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಪ್ರಜ್ಞೆತಪ್ಪಿಸಿ ಅಪಹರಿಸಿಕೊಂಡು ಹೋಗಿದ್ದ ನಾಲ್ವರಿಗೆ ವಿಚಾರಣೆಗಾಗಿ ಹಾಜರಾಗುವಂತೆ ಪೀಣ್ಯ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ತಿಂಗಳು 17 ವರ್ಷದ ಪಿಯು ವಿದ್ಯಾರ್ಥಿನಿ ತುಮಕೂರಿಗೆ ಹೋಗಲು ಜಾಲಹಳ್ಳಿ ಕ್ರಾಸ್ ಬಳಿ ಬಸ್‍ಗಾಗಿ ಕಾಯುತ್ತಿದ್ದಾಗ ಇಬ್ಬರು ಯುವಕರು, ಇಬ್ಬರು ಯುವತಿಯರು ಈಕೆ ಬಳಿ ಹೋಗಿ ರಾಸಾಯನಿಕ ಸಿಂಪಡಿಸಿ, ಮಾಸ್ಕ್ ಹಾಕಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಅಪಹರಿಸಿಕೊಂಡು ಮೈಸೂರಿಗೆ ಹೋಗಿ ರಸ್ತೆಬದಿ ಕಾರು ನಿಲ್ಲಿಸಿ ಇವರೆಲ್ಲಾ ಟೀ ಕುಡಿಯಲು ಹೋಗಿದ್ದಾರೆ.

ಆ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಪ್ರಜ್ಞೆ ಬಂದಿದ್ದರೂ ಪ್ರಜ್ಞೆ ತಪ್ಪಿದಂತೆ ನಟಿಸಿ ಕಾರಿನಲ್ಲಿ ಯಾರೂ ಇಲ್ಲದಿರುವುದು ಗೊತ್ತಾದ ತಕ್ಷಣ ಇಳಿದು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಕೃತ್ಯ ನಡೆದ ಸ್ಥಳ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದಾಗಿದೆ ಎಂಬುದು ತಿಳಿದು ಪ್ರಕರಣವನ್ನು ಪೀಣ್ಯ ಠಾಣೆಗೆ ವರ್ಗಾಹಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೀಣ್ಯ ಠಾಣೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ, ಅಪಹರಣ ಮಾಡಲಾಗಿದ್ದ ಕಾರಿನ ನಂಬರ್ ಪತ್ತೆಹಚ್ಚಿ ನಾಲ್ವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

RELATED ARTICLES

Latest News