ಬೆಂಗಳೂರು,ಸೆ.7- ಇಂದು ರಾತ್ರಿ ಗೋಚರಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪ್ರಸಿದ್ಧ ದೇವಾಲಯಗಳು ಇಂದು ಸಂಜೆ 4.30ಕ್ಕೆ ಬಂದ್ ಆಗಲಿವೆ. ಪ್ರತಿ ದಿನ ರಾತ್ರಿ 8.30ಕ್ಕೆ ಮುಚ್ಚಲ್ಪಡುತ್ತಿದ್ದ ದೇವಾಲಯಗಳ ಬಾಗಿಲುಗಳನ್ನು ಗ್ರಹಣದ ಅಂಗವಾಗಿ ಸಂಜೆ 4.30ಕ್ಕೆ ಮುಚ್ಚಲಾಗುತ್ತದೆ. ಗ್ರಹಣದ ನಂತರ ಎಂದಿನಂತೆ ನಾಳೆ (ಸೋಮವಾರ) ಬೆಳಿಗ್ಗೆ ಶುದ್ದೀಕರಣ ಮಾಡಿ ಬೆಳಗ್ಗೆ 9 ಗಂಟೆಯ ನಂತರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹೀಗಾಗಿ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಭಾರತದಾದ್ಯಂತ ಗೋಚರಿಸಲಿದೆ. ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದೆ. ಇಂದು ರಾತ್ರಿ 9.56ರ ರಾತ್ರಿ ಸ್ಪರ್ಶಕಾಲ ಹಾಗೂ ಸೆ.8ರ ಮಧ್ಯರಾತ್ರಿ 1.26ಕ್ಕೆ ಮೋಕ್ಷಕಾಲ ಸಂಭವಿಸಲಿದೆ. ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12.28 ರಿಂದ 1.56ರ ವರೆಗೆ ಇರಲಿದೆ. ಸುದೀರ್ಘ ಅವಧಿ ಅಂದರೆ ಮೂರು ಗಂಟೆಗಳ ಕಾಲ ಸಂಭವಿಸಲಿದೆ. ಭಾರತದಲ್ಲಿ ಎಲ್ಲೆಡೆ ಗ್ರಹಣ ಗೋಚರವಾಗಲಿದೆ.
ರಕ್ತವರ್ಣದಲ್ಲಿ ಚಂದಿರ ಗೋಚರಿಸಲಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.ದೇವಸ್ಥಾನಗಳಲ್ಲಿ ಯಾವುದೇ ಮಾರ್ಗಸೂಚಿ ಇರುವುದಿಲ್ಲ. ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಾಲಯಗಳನ್ನು ಕೆಲವರು ಮುಚ್ಚುತ್ತಾರೆ. ಕೆಲವರು ಮುಚ್ಚುವುದಿಲ್ಲ. ಆದರೆ ಅವರವರ ಸಂಪ್ರದಾಯವನ್ನು ಪಾಲಿಸುತ್ತಾರೆ. ಚಂದ್ರನು ಸಂಪೂರ್ಣವಾಗಿ ಕೆಂಪುಬಣ್ಣಕ್ಕೆ ತಿರುಗುತ್ತಾನೆ. ಈ ವಿದ್ಯಮಾನವನ್ನು ಸಾಮಾನ್ಯವಾಗಿ ರಕ್ತಚಂದ್ರ ಎಂದು ಕರೆಯಲಾಗುತ್ತದೆ.
ಗ್ರಹಣವು ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಬಿದ್ದಾಗ ಚಂದ್ರಗ್ರಹಣ ಸಂಭವಿಸಲಿದೆ. ಈ ಸಮಯದಲ್ಲಿ ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ವಕ್ರೀಭವನಗೊಳ್ಳುತ್ತವೆ. ಇದರಿಂದ ಚಂದ್ರ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ ಎಂದು ಜವಹರಲಾಲ್ ನೆಹರೂ ತಾರಾಲಯದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಕೊನೆಯ ಸಂಪೂರ್ಣ ಚಂದ್ರಗ್ರಹಣವು 2018 ರಲ್ಲಿ ಸಂಭವಿಸಿತ್ತು. 2028 ಡಿಸೆಂಬರ್ 30 ರಂದು ಮತ್ತೆ ಚಂದ್ರಗ್ರಹಣ ಸಂಭವಿಸಲಿದೆ. ಜಪಾನ್, ಉತ್ತರಧೃವ, ಯೂರೋಪ್ ಪ್ರಾಂತ್ಯಗಳಲ್ಲೂ ಈ ಗ್ರಹಣ ಗೋಚರಿಸಲಿದ್ದು, ಖಗೋಳ ಭೂತವಿಜ್ಞಾನಿಗಳ ಪ್ರಕಾರ, ಸಂಪೂರ್ಣ ಚಂದ್ರಗ್ರಹಣವು 1 ಗಂಟೆ 25 ನಿಮಿಷಗಳ ಕಾಲ ಇರುತ್ತದೆ.
ಗ್ರಹಣ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ನಂದಿಗ್ರಾಮದ ಭೋಗ ನಂದೀಶ್ವರ ದೇವಾಲಯ ಮತ್ತು ನಂದಿಗಿರಿಧಾಮದ ಯೋಗ ನಂದೀಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳು ಇಂದು ಸಂಜೆ 4.30ಕ್ಕೆ ಬಂದ್ ಆಗಲಿವೆ.