ಬೆಂಗಳೂರು, ಮೇ 27- ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಅವರು ಸಿಸಿಬಿ ಪೊಲೀಸರ ಮುಂದೆ ಹಾಜರಾಗಲು ಒಂದು ವಾರ ಕಾಲಾವಕಾಶ ಕೇಳಿದ್ದಾರೆ.
ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಪೈಕಿ 86 ಮಂದಿ ಡ್ರಗ್ಸ್ ಸೇವಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿತ್ತು. ದಾಳಿ ಸಂದರ್ಭದಲ್ಲಿ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ನಟಿ ಸೇರಿದಂತೆ ಇಂದು 8 ಮಂದಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿಸಿಬಿ ನೋಟಿಸ್ ನೀಡಿತ್ತು. ಆದರೆ, ಅನಾರೋಗ್ಯ ಹಾಗೂ ಇತರೆ ಕಾರಣ ನೀಡಿ ಒಂದು ವಾರದ ಕಾಲಾವಕಾಶ ನೀಡಬೇಕೆಂದು ನಟಿ ಹೇಮಾ ಮನವಿ ಮಾಡಿದ್ದಾರೆ.
ಇನ್ನುಳಿದ ಏಳು ಮಂದಿ ಇಂದು ಸಂಜೆ ವೇಳೆಗೆ ಸಿಸಿಬಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಮಾದಕ ಜಾಲದ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಶೆಯಲ್ಲಿ ತೇಲಿದ್ದವರಿಗೆ ನೋಟಿಸ್ ನೀಡಿ ತನಿಖೆ ಚುರುಕುಗೊಳಿಸುತ್ತಿದ್ದಂತೆ ರೇವ್ ಪಾರ್ಟಿಯಲ್ಲಿ ಬೆಟ್ಟಿಂಗ್ ದಂಧೆ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆದಿರುವುದು ಗೊತ್ತಾಗಿದ್ದು, ರೇವ್ ಪಾರ್ಟಿಯ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.