Sunday, July 7, 2024
Homeರಾಜ್ಯರೇವ್‌ ಪಾರ್ಟಿ ಪ್ರಕರಣ : 5 ಮಂದಿಯ ಬ್ಯಾಂಕ್‌ ಖಾತೆ ಸೀಸ್‌‍

ರೇವ್‌ ಪಾರ್ಟಿ ಪ್ರಕರಣ : 5 ಮಂದಿಯ ಬ್ಯಾಂಕ್‌ ಖಾತೆ ಸೀಸ್‌‍

ಬೆಂಗಳೂರು, ಮೇ 25- ಫಾರ್ಮ್‌ಹೌಸ್‌‍ನಲ್ಲಿ ನಡೆದ ರೇವ್‌ ಪಾರ್ಟಿ ಪ್ರಕರಣದಲ್ಲಿ ಬಂಧಿತರಾಗಿರುವ 5 ಮಂದಿಯ ಬ್ಯಾಂಕ್‌ ಅಕೌಂಟ್‌ಗಳಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಐದು ಮಂದಿಯ ಬ್ಯಾಂಕ್‌ ಖಾತೆಗಳನ್ನು ಸೀಸ್‌‍ ಮಾಡಿಸಲು ಮುಂದಾಗಿದ್ದಾರೆ.

ಈ ರೀತಿಯ ರೇವ್‌ ಪಾರ್ಟಿಗಳನ್ನು ಎಲ್ಲೆಲ್ಲಿ ಮಾಡಿಸಲಾಗಿದೆ, ಯಾರೆಲ್ಲಾ ಭಾಗಿಯಾಗಿದ್ದರು, ಎಷ್ಟೆಷ್ಟು ಹಣ ಸಂಗ್ರಹಿಸಲಾಗಿತ್ತು, ಪಾರ್ಟಿಗೆ ಎಲ್ಲಿಂದ ಮಾದಕ ವಸ್ತು ಸರಬರಾಜು ಆಗುತ್ತಿತ್ತು ಎಂಬೆಲ್ಲಾ ಮಾಹಿತಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಈ ಐದು ಮಂದಿಯ ಮೊಬೈಲ್‌ಗಳ ಮಿರರ್‌ ಇಮೇಜ್‌ ಮಾಡಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವಾಸು ಎಂಬಾತನ ಹುಟ್ಟು ಹಬ್ಬದ ಅಂಗವಾಗಿ ಸನ್‌ಸೆಟ್‌ ಟು ಸನ್‌ರೈಸ್‌‍ ವಿಕ್ಟರಿ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ರೇವ್‌ ಪಾರ್ಟಿ ಯಲ್ಲಿ 103 ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ದೊಡ್ಡಮಟ್ಟದಲ್ಲಿ ಮಾದಕ ವಸ್ತು ಬಳಸಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದಲ್ಲದೇ, ದಾಳಿ ಸಂದರ್ಭದಲ್ಲಿ ಎಂಡಿಎಂಎ, ಕೊಕೇನ್‌ ಹಾಗೂ ಹೈಡ್ರೋ ಗಾಂಜಾ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ರಕ್ತದ ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ 86 ಮಂದಿ ಡ್ರಗ್‌ ಸೇವಿಸಿರುವುದ ದೃಢಪಟ್ಟಿದೆ.ಈ ಪಾರ್ಟಿಯಲ್ಲಿ ಇಬ್ಬರು ತೆಲುಗು ನಟಿಯರು, ಕಿರುತೆರೆ ನಟಿಯರು, ಸಾಫ್‌್ಟ ವೇರ್‌ ಎಂಜಿನಿಯರ್‌ಗಳು ಭಾಗವಹಿಸಿದ್ದರು.

ಆಂಧ್ರ ಸಚಿವರ ಆಪ್ತರು ವಶಕ್ಕೆ :
ನಗರದ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಫಾರ್ಮ್‌ ಹೌಸ್‌‍ನಲ್ಲಿ ನಡೆದ ರೇವ್‌ ಪಾರ್ಟಿ ಪ್ರಕರಣದ ತನಿಖೆಯನ್ನು ತೀವ್ರ ಗೊಳಿಸಿರುವ ಸಿಸಿಬಿ ಪೊಲೀಸರು ಆಂಧ್ರ ಪ್ರದೇಶದ ಸಚಿವ ಮತ್ತು ಶಾಸಕರೊಬ್ಬರ ಆಪ್ತರುಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ಕಾರೊಂದರಲ್ಲಿ ಎಮ್‌ಎಲ್‌ಎ ಪಾಸ್‌‍ ಪತ್ತೆಯಾಗಿತ್ತು. ಅದರ ಜಾಡುಹಿಡಿದು ಪೊಲೀಸರು ತನಿಖೆ ಕೈಗೊಂಡು ಆಪ್ತನನ್ನು ವಶಕ್ಕೆ ಪಡೆದಿದ್ದಾರೆ.ರೇವ್‌ ಪಾರ್ಟಿ ಆಯೋಜನೆಯಲ್ಲಿ ಆಂಧ್ರದ ಸಚಿವರೊಬ್ಬರ ಆಪ್ತನ ಪ್ರಮುಖ ಪಾತ್ರವಿದೆ ಎಂಬುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಲಾಗಿದೆ.

ಮೇ 19 ರಂದು ಸಂಜೆ ಆಯೋಜಿಸಿದ್ದ ಸನ್‌ಸೆಟ್‌ ಟು ಸನ್‌ರೈಸ್‌‍ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಪೈಕಿ 86 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಅವರೆಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದ್ದಾರೆ.ಇದೆಲ್ಲದರ ನಡುವೆ ಕರ್ತವ್ಯಲೋಪದಲ್ಲಿ ಹೆಬ್ಬಗೋಡಿ ಪೊಲೀಸ್‌‍ ಠಾಣೆಯ ಮೂವರು ಸಿಬ್ಬಂದಿಗಳ ತಲೆದಂಡ ಸಹ ಆಗಿದೆ.

RELATED ARTICLES

Latest News