ಮೈಸೂರು, ಸೆ. 29- ಕೆಆರ್‌ಎಸ್‌ನ ಹಿನ್ನೀರಿನ ಬಳಿ ಅನಧಿಕೃತವಾಗಿ ರೇವ್ ಪಾರ್ಟಿ ಆಯೋಜಿಸಿದ್ದ ಘಟನೆ ಮೈಸೂರನ್ನು ಬೆಚ್ಚಿಬೀಳಿಸಿದೆ.ಮಾಹಿತಿ ತಿಳಿದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿರ್ಬಂಧಿತ ಪ್ರದೇಶವಾದ ಇಲ್ಲಿ ಅನಧಿಕೃತವಾಗಿ ಈ ಪಾರ್ಟಿ ಆಯೋಜಿಸಿ ಯುವಕ-ಯುವತಿಯರನ್ನು ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನಿಸಲಾಗಿತ್ತು.ಆನ್‌ಲೈನ್‌ನಲ್ಲೇ ಹಣ ಕಟ್ಟಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ಜೋಡಿಗಳು ಇದರಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದ್ದು, ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಮೀನಿನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ಹೇಳಲಾಗುತ್ತಿದ್ದು, ಮದ್ಯದ ಬಾಟಲಿಗಳು, ತರಾವರಿ ಭೋಜನ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪಾರ್ಟಿಗಾಗಿ ವಿದೇಶದಿಂದಲೂ ಕೆಲವು ಡಿಜೆಗಳನ್ನು ಕರೆಸಲಾಗಿತ್ತು. ಜೋರು ಧ್ವನಿಯನ್ನು ಆಲಿಸಿದ ಅಕ್ಕಪಕ್ಕದ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ ನಂತರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಸಾಮಾಜಿಕ ಜಾಲತಾಣದಲ್ಲೂ ಕೂಡ ಹರಿದಾಡುತ್ತಿದೆ.
ಇಲವಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಸುಮಾರು 50 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.ನಿನ್ನೆ ತಡರಾತ್ರಿ ಪಾರ್ಟಿ ಆರಂಭವಾಗಿತ್ತು. ಡಿಜೆ ಮೂಲಕ ಅಬ್ಬರದ ಸಂಗೀತ ಏರ್ಪಡಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.
ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಪಾರ್ಟಿಗಾಗಿ ಬಳಸಲಾದ ಸಂಗೀತ ಉಪಕರಣಗಳು ಸೇರಿದಂತೆ 30 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ದಾಳಿ ವೇಳೆ ಯಾವುದೇ ಮಾದಕ ವಸ್ತು, ಗಾಂಜಾ ದೊರತಿಲ್ಲವೆಂದು ಎಸ್ಪಿ ವಿಷ್ಣುವರ್ಧನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಸರಾಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಪ್ರವಾಸಿಗರನ್ನು ಆಕರ್ಷಿಸಲು ಅನಧಿಕೃತವಾಗಿ ಕೆಲವೆಡೆ ಇಂತಹ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ವೈದ್ಯಕೀಯ ತಪಾಸಣೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.