ಉಡುಪಿ,ಮಾ.19- ಕಾರ್ಕಳ ತಾಲ್ಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಭೇಟಿ ನೀಡಿ ನಾಗದೇವರಿಗೆ ಪಂಚಾಮೃತ ಅಭಿಷೇಕ, ಪೂಜೆ, ನಾಗತಂಬಿಲ ಸೇವೆ ಸಲ್ಲಿಸಿದ್ದಾರೆ.
ರವಿಶಾಸ್ತ್ರಿಯವರ ಹಿರಿಯರು ಕರ್ವಾಲು ಮೂಲದವರಾಗಿದ್ದು, 50 ವರ್ಷಗಳ ಹಿಂದೆ ಇವರ ಹಿರಿಯರೆಲ್ಲರೂ ಎರ್ಲಪಾಡಿ ತೊರೆದಿದ್ದರು. ಸಂತಾನವಿಲ್ಲದೆ ಕೊರಗಿದ್ದ ರವಿಶಾಸ್ತ್ರಿ ದಂಪತಿ ದಶಕಗಳ ಹಿಂದೆ ಎರ್ಲಪಾಡಿಗೆ ಭೇಟಿ ನೀಡಿ ನಾಗದೇವನಹಲ್ಲಿ ಪ್ರಾರ್ಥಿಸಿದ್ದರು.
ನಾಗ ಸೇವೆ ನಂತರ ರವಿ ಶಾಸ್ತ್ರಿ ದಂಪತಿಗೆ ಹೆಣ್ಣು ಮಗುವಾಗಿದ್ದು, ಆಗಿನಿಂದಲೂ ನಿರಂತರವಾಗಿ ರವಿಶಾಸ್ತ್ರಿ ಕುಟುಂಬದವರು ಎರ್ಲಪಾಡಿಗೆ ಭೇಟಿ ನೀಡುತ್ತಿರುತ್ತಾರೆ. 2007ರಿಂದ ಸತತ 13 ಬಾರಿ ನಾಗ ದರ್ಶನಕ್ಕಾಗಿ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬರುತ್ತಿದ್ದು, ನಾಗದೇವರಿಗೆ ಪಂಚಾಮೃತ ಅಭಿಷೇಕ, ಪೂಜೆ, ನಾಗತಂಬಿಲ ಸೇವೆ ಸಲ್ಲಿಸುತ್ತಿದ್ದಾರೆ.