ಬೆಂಗಳೂರು, ಅ.8– ವಿಶ್ವದ ಅತ್ಯಂತ ಶ್ರೀಮಂತ -ಪ್ರಾಂಚೈಸಿ ಲೀಗ್‌ನ 17 ಆವೃತ್ತಿಗಳು ಕಳೆದಿದ್ದರೂ ಒಮ್ಮೆಯೂ ಟ್ರೋಫಿ ಜಯಸದ ಆರ್‌ಸಿಬಿ ತಮ್ಮ ಸಾಮಾಜಿಕ ಕಾರ್ಯ ಹಾಗೂ ಪರಿಸರ ಪ್ರೇಮ ಮೆರೆಯುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದು, ಈಗ ಯಲಹಂಕದಲ್ಲಿ ಎರಡು ಕೆರೆಗಳನ್ನು ಪುನಶ್ಚೇತನಗೊಳಿಸಿ ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದೆ.
ರಾಜಾನುಕುಂಟೆ ಗ್ರಾ.ಪಂ. ವ್ಯಾಪ್ತಿಗೆ ಬರುವ ಇಟಗಲ್‌ಪುರ ಹಾಗೂ ಸಾದೇನಹಳ್ಳಿ ಕೆರೆಗಳನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಇಂಡಿಯಾ ಕೇರ್ಸ್ ಫೌಂಡೇಶನ್ ಹಾಗೂ -ಫ್ರೆಂಡ್ಸ್ ಆಫ್ ಲೇಕ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ಪ್ರಾಂಚೈಸಿ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು, ಇದಕ್ಕಾಗಿ 1.10 ಕೋಟಿ ರೂ.ಗಳನ್ನು ವ್ಯಯಿಸಿದೆ.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಬೆಂಗಳೂರು -ಪ್ರಾಂಚೈಸಿ ಇಟಗಲ್ ಪುರ ಹಾಗೂ ಸಾದೇನಹಳ್ಳಿ ಕೆರೆಗಳನ್ನು 1.10 ಕೋಟಿ ರೂ.ಗಳನ್ನು ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದು ಇದರ ಸಂರಕ್ಷಣೆಗೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಸಹಕರಿಸಬೇಕು’ ಎಂದು ಕರೆ ನೀಡಿದ್ದಾರೆ.
ಆರ್‌ಸಿಬಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರಾಜೇಶ್ ಮೆನನ್ ಮಾತನಾಡಿ, `ಸಾದೇನಹಳ್ಳಿ ಮತ್ತು ಇಟ್ಟಗಲ್‌ಪುರ ಕೆರೆಗಳ ಆಯ್ಕೆಯು ಕೆಳಭಾಗದ ಕೆರೆಗಳನ್ನು ಬೆಂಬಲಿಸುವಲ್ಲಿ, ಪ್ರದೇಶಕ್ಕೆ ನೀರನ್ನು ಭದ್ರಪಡಿಸುವಲ್ಲಿ ಮತ್ತು ಮಳೆಗಾಲದಲ್ಲಿ ಪ್ರವಾಹ ನಿಯಂತ್ರಣಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.
ಇಟಗಲ್ ಗ್ರಾಮದ ಮುಖಂಡ ಎಂ. ಮೋಹನ್‌ಕುಮಾರ್ ಮಾತನಾಡಿ, ` ಕೆರೆಗಳ ಪುನಶ್ಚೇತನದಿಂದ ಕೃಷಿಗೆ ಹೆಚ್ಚು ನೆರವು ಆಗಲಿದ್ದು, ಅಂತರ್ಜಲಮಟ್ಟ ಹೆಚ್ಚುವ ಮೂಲಕ ಕೊಳವೆ ಬಾವಿಗಳಲ್ಲೂ ನೀರು ಸಿಗಲಿದೆ’ ಎಂದು ಹೇಳಿದರು.
ಕೆರೆಯ ಗಡಿಯನ್ನು ಗುರುತಿಸಿ 20 ಸಾವಿರ ಟನ್ ಹೂಳು ತೆಗೆಯಲಾಗಿದೆ. ಅಲ್ಲದೆ ಈ ಪ್ರದೇಶದ ಸುತ್ತಮುತ್ತಲಿದ್ದ ಕಳೆ ಗಿಡಗಳನ್ನು ತೆರವುಗೊಳಿಸಿ ಸುಸಜ್ಜಿತ ಏರಿ ನಿರ್ಮಾಣಗೊಳಿಸಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದು, ಕೆರೆಯ ಸುತ್ತ ಔಷಽ ಹಾಗೂ 2 ಸಾವಿರ ಪ್ರಭೇದದಗಿಡಗಳನ್ನು ಹಾಕಲಾಗಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಚನ್ನಮ್ಮ , ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ, ಪಿಡಿಒ ನಾಗರಾಜ್, ಬಿಜೆಪಿ ಮುಖಂಡರಾದ ಸೋಮಶೇಖರ್, ಪ್ರಕಾಶ್‌ಗೌಡ, ಅಪ್ಪಣ್ಣಗೌಡ ಮುಂತಾದವರು ಹಾಜರಿದ್ದರು.