ಬೆಂಗಳೂರು, ಮೇ 30- ಆರ್‌ಸಿಬಿ ಫೈನಲ್ ತಲುಪುತ್ತಿದ್ದಂತೆ ಅಭಿಮಾನಿಗಳ ಕ್ರೇಜ್ ಜೋರಾಗಿದೆ. ನೂರಾರು ರೂ. ಬೆಲೆ ಬಾಳುವ ಟಿಕೆಟ್‌ಗಳನ್ನು ಲಕ್ಷ ಲಕ್ಷ ನೀಡಿ ಖರೀದಿಸಲು ಫ್ಯಾನ್‌ಗಳು ಮುಗಿ ಬಿದ್ದಿದ್ದಾರೆ.
ಆರ್‌ಸಿಬಿ ಐಪಿಎಲ್ ಪೈನಲ್‌ಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ಅಹಮದಾಬಾದ್ ನಲ್ಲಿ ನಡೆಯೋ ಪೈನಲ್ ಪಂದ್ಯದ ಟಿಕೆಟ್‌ಗೆ ಭಾರೀ ಬೇಡಿಕೆ ಶುರುವಾಗಿದೆ.ಆರ್‌ಸಿಬಿ ಪಂಜಾಬ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಫೈನಲ್ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುವುದರಿಂದ ಅಭಿಮಾನಿಗಳು ಕಾಳಸಂತೆಯಲ್ಲಿ ಟಿಕೆಟ್ ಖರೀದಿಸುತ್ತಿದ್ದಾರೆ.
ಟಿಕೆಟ್ ನ ಮೂಲ ಬೆಲೆಗಿಂತ ಐದು ಪಟ್ಟು ಹಣ ನೀಡಿ ಟಿಕೆಟ್ ಖರೀದಿಸಲು ತಡಕಾಡುತ್ತಿದ್ದಾರೆ. ಕೆಲವರು ಆನ್‌ಲೈನ್ ಮೂಲಕ ಹೇಳಿದಷ್ಟು ಹಣ ನೀಡಿ ಟಿಕೆಟ್ ಖರೀದಿಸುತ್ತಿದ್ದಾರೆ. ಇನ್ನು ಕೆಲವರು ಕಾಳಸಂತೆಯ ಮೊರೆ ಹೋಗಿದ್ದಾರೆ. ನಗರದ ನೂರಾರು ಆರ್‌ಸಿಬಿ ಅಭಿಮಾನಿಗಳು ಜೂನ್ 3 ಕ್ಕೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ವೀಕ್ಷಣೆಗೆ ತೆರಳಲು ತಯಾರಿ ನಡೆಸಿರುವುದರಿಂದ ವಿಮಾನ ಟಿಕೆಟ್‌ಗೂ ಡಿಮ್ಯಾಂಡ್ ಶುರುವಾಗಿದೆ.
ಇಲ್ಲಿಂದ ಸಾವಿರಾರು ಅರ್ ಸಿ ಬಿ ಅಭಿಮಾನಿಗಳು ಈಗಾಗಲೇ ವಿಮಾನ ಬುಕ್ ಮಾಡಿದ್ಧಾರೆ. ಫೈನಲ್ ಟಿಕೆಟ್ ಸಿಗದವರು ಪಬ್, ಬಾರ್‌ಗಳಲ್ಲಿ ಎಲ್‌ಇಡಿಗಳಲ್ಲಿ ಪ್ರದರ್ಶಿಸುವ ಫೈನಲ್ ವೀಕ್ಷಣೆಗೆ ಸೀಟುಗಳನ್ನು ಕಾಯ್ದಿರಿಸುತ್ತಿದ್ದಾರೆ.