ಬೆಂಗಳೂರು,ಜು.1- ಐಪಿಎಸ್ ಅಧಿಕಾರಿ ವಿಕಾಸ್‌ಕುಮಾರ್ ಅವರ ಅಮಾನತು ಆದೇಶವನ್ನು ಕೇಂದ್ರ ಆಡಳಿತ ನ್ಯಾಯಾಧಿಕರಣ ರದ್ದುಗೊಳಿಸಿದ್ದು, ಈ ಹಿಂದಿನ ಭತ್ಯೆ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದೆ.
ಜೂ.3 ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಕಠಿಣ ಕ್ರಮ ಕೈಗೊಂಡಿದ್ದ ಸರ್ಕಾರ ಬೆಂಗಳೂರಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್, ಕೇಂದ್ರ ವಲಯದ ಡಿಸಿಪಿ ಎಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್‌ನ ಇನ್‌ಸ್ಪೆಕ್ಟರ್ ಎ.ಕೆ.ಗಿರೀಶ್ ಅವರನ್ನು ಜೂ.5 ರಂದು ಅಮಾನತುಗೊಳಿಸಿತ್ತು.
ಈ ಆದೇಶವನ್ನು ವಿಕಾಸ್‌ಕುಮಾರ್ ಅವರು ಕೇಂದ್ರ ನ್ಯಾಯಾಧಿಕರಣ (ಸಿಎಟಿ)ದಲ್ಲಿ ಪ್ರಶ್ನಿಸಿದ್ದರು. ತೀರ್ಪು ನೀಡಿರುವ ಸಿಎಟಿ ನ್ಯಾ.ಬಿ.ಕೆ.ಶ್ರೀವಾಸ್ತವ ಮತ್ತು ಸಂತೋಷ್ ಮೆಹ್ರಾ ಅವರನ್ನೊಳಗೊಂಡ ಪೀಠ ಅಮಾನತು ಆದೇಶವನ್ನು ರದ್ದುಗೊಳಿಸಿದೆ.ಹಿಂದಿನ ಎಲ್ಲಾ ಭತ್ಯೆ ಹಾಗೂ ಸೌಲಭ್ಯಗಳನ್ನು ಮುಂದುವರೆಸಲು ನಿರ್ದೇಶನ ನೀಡಿದೆ. ಉಳಿದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ ಮತ್ತು ಎಚ್.ಟಿ.ಶೇಖರ್‌ರವರ ಅಮಾನತು ಆದೇಶವನ್ನು ಮರುಪರಿಶೀಲಿಸಲು ಸೂಚಿಸಿದೆ.
ವಿಕಾಸ್‌ಕುಮಾರ್‌ರವರ ಪರವಾಗಿ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದರು. ಹಿಂದಿನ ವಿಚಾರಣೆಯಲ್ಲಿ ಸಿಎಟಿ ರಾಜ್ಯಸರ್ಕಾರಕ್ಕೆ ನೋಟೀಸ್ ನೀಡಿತ್ತು. ಆಕ್ಷೇಪಣೆ ಸಲ್ಲಿಸಲು ಅಡ್ವೊಕೇಟ್ ಜನರಲ್ ಕಾಲವಕಾಶ ಕೋರಿದ್ದರು. ಇಂದಿನ ವಿಚಾರಣೆಯಲ್ಲಿ ತೀರ್ಪು ಪ್ರಕಟವಾಗಿದೆ. ಅಮಾನತು ಆದೇಶವನ್ನು ಸಿಎಟಿ ರದ್ದು ಮಾಡಿದ್ದರಿಂದಾಗಿ ರಾಜ್ಯಸರ್ಕಾರಕ್ಕೆ ಮುಖಭಂಗವಾದಂತಾಗಿದೆ.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ