ಬೆಂಗಳೂರು,ನ.27- ವಿಶ್ವದ ಅತ್ಯಂತ ಐಷಾರಾಮಿ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಐಪಿಎಲ್ ಟೂರ್ನಿಯ ಹದಿನೆಂಟನೇ ಆವೃತ್ತಿಯಲ್ಲಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಬೇಕೆಂಬ ದೃಷ್ಟಿಯಿಂದ ಆರ್ ಸಿಬಿ ಫ್ರಾಂಚೈಸಿ ಕನ್ನಡದಲ್ಲೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವನ್ನು ಸೃಷ್ಟಿಸಿದ್ದರೂ ಹಿಂದಿ ಮೂಲದ ಎಕ್ಸ್ ಖಾತೆಯಲ್ಲಿ ತಂಡದ ಪ್ರಮುಖ ವಿಷಯ ಪ್ರಸ್ತಾಪಿಸಿದ್ದನ್ನು ಕಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫ್ರಾಂಚೈಸಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿ ಹೇರಿಕೆ ಬೇಡ?
ಐಪಿಎಲ್ ಚಾಂಪಿಯನ್ ತಂಡವಾದ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್ ಸಿಬಿ ರೀತಿಯೇ ಕಪ್ ಗೆಲ್ಲದೆ ಉಳಿದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಾಲೀಕರೇ ವಿಶೇಷ ಸಂದರ್ಭಗಳಲ್ಲಿ ಕನ್ನಡದಲ್ಲೇ ಶುಭಾಶಯ ಕೋರುತ್ತಾರೆ. ಆದರೆ ಕರುನಾಡಿನ ಮೂಲದ ಬೆಂಗಳೂರು ತಂಡವು ಕನ್ನಡದ ಬದಲಿಗೆ ಹಿಂದಿ ಭಾಷೆ ಹೇರಿಕೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಅಭಿಮಾನಿಗಳು ತಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನವೆಂಬರ್ 24 ಮತ್ತು 25 ರಂದು ಜೆದ್ದಾದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ವಿದ್ವತ್ ಕಾವೇರಪ್ಪ ರಂತಹ ಯುವ ಹಾಗೂ ಹಿರಿಯ ತಂಡಗಳನ್ನು ಖರೀದಿಸಲು ಒಲವು ತೋರದೆ ವಿದೇಶಿ ಹಾಗೂ ಪರರಾಜ್ಯಗಳ ಆಟಗಾರರ ಮೇಲೆ ಹಣ ಸುರಿದಾಗಲೂ ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಮನೋಜ್ ಭಂಡಾಗೆ ಹಾಗೂ ದೇವದತ್ ಪಡಿಕ್ಕಲ್‌ರಂತಹ ಆಟಗಾರರನ್ನು ಖರೀದಿಸುವ ಮೂಲಕ ಆಟಗಾರರ ಕೋಪವನ್ನು ಮಾಲೀಕರು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದರು. ಆದರೆ ಈಗ ಹಿಂದಿ ಏರಿಕೆ ಮಾಡಲು ಹೊರಟಿರುವ ಕ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಕನ್ನಡವನ್ನು ಗೌರವಿಸಿ:
`ಹೆಮೆಯ ಕನ್ನಡಿಗ ಹಾಗೂ ಬೆಂಗಳೂರು ಮೂಲದವನಾದ ನಾನು ಅಪ್ಪಟ ಆರ್ ಸಿಬಿ ತಂಡದ ಅಭಿಮಾನಿಯಾಗಿದ್ದೇನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಫ್ರಾಂಚೈಸಿ ಹಿಂದಿಯಲ್ಲಿ ಹೆಚ್ಚಾಗಿ ವ್ಯವಹರಿಸುವುದನ್ನು ನೋಡಲು ಬೇಸರವೆನಿಸುತ್ತದೆ. ಬೆಂಗಳೂರು ತಂಡದ ಮಾಲೀಕರು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಮೊದಲು ಗೌರವಿಸಲಿ, ಹಿಂದಿ ಭಾಷೆಯ ಬದಲಿಗೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸಲಿ’ ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ್ರಾವಿಡ್- ಕುಂಬ್ಳೆ ತಕ್ಕ ಪಾಠ ಕಲಿಸಿದ್ದಾರೆ:
`ಆರ್ ಸಿಬಿ ಕನ್ನಡಿಗರ ತಂಡವೇ ಅಲ್ಲ. ಡೆಲ್ಲಿ ಕ್ಯಾಪಿಟಲ್‌್ಸ ಅವರೇ ಕನ್ನಡದಲ್ಲಿ ಟ್ವೀಟ್ ಮಾಡುತ್ತಾರೆ. ಆದರೆ ನೀವು ಹಿಂದಿ ಬಳಕೆ ಮಾಡುತ್ತಿರುವುದಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರು ಸರಿಯಾದ ನಿರ್ಣಯ ಮಾಡಿದ್ದಾರೆ. ನೀವು ನಮ ಬೆಂಗಳೂರು ಹೆಸರನ್ನು ಹಾಳು ಮಾಡುತ್ತಿದ್ದೀರಿ, ತಂಡದಲ್ಲಿ ಸ್ಥಳೀಯ ಆಟಗಾರರು ಇಲ್ಲದಿರುವುದರಿಂದ ಸ್ಫೂರ್ತಿಯೇ ಕಳೆದುಹೋಗಿದೆ. ಕನ್ನಡಿಗರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಮತ್ತೊಬ್ಬ ಅಭಿಮಾನಿ ತನ್ನ ಕೋಪ ವ್ಯಕ್ತಪಡಿಸಿದ್ದಾನೆ.