ಸಂಡೂರು,ನ.9- ಕೋವಿಡ್ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿ ಪಿಪಿಇ ಕಿಟ್ ಇಲ್ಲವೇ ವೈದ್ಯಕೀಯ ಪರಿಕರಗಳನ್ನು ಖರೀದಿ ಮಾಡಿಲ್ಲ. ದ್ವೇಷಕ್ಕಾಗಿ ನಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸ್ಸು ಮಾಡಿರಬಹುದೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 19 ವೇಳೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಪಿಪಿಇ ಕಿಟ್ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಪಾರದರ್ಶಕವಾಗಿ ನಡೆದಿರುವುದರಿಂದ ಇದರಲ್ಲಿ ಅಕ್ರಮ ಎಲ್ಲಿಂದ ನಡೆಯುತ್ತದೆ ಎಂದು ಪ್ರಶ್ನಿಸಿದರು.
ನಾವು ಪ್ರತಿಯೊಂದನ್ನು ಕಾನೂನುಬದ್ದವಾಗಿಯೇ ಖರೀದಿ ಮಾಡಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇರಲಿಲ್ಲ. ಈಗ ತಮ ಮೇಲೆ ಬಂದಿರುವ ಆರೋಪಗಳನ್ನು ಮರೆಮಾಚಲು ನಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಹಾಗೂ ರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಖುನ್ನಾ ಆಯೋಗ ಶಿಫಾರಸ್ಸು ಮಾಡಿರುವುದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು.
ನಾವು ಕೂಡ ಕಾನೂನು ಪ್ರಕಾರ ಹೋರಾಟ ನಡೆಸುತ್ತೇವೆ. ಸರ್ಕಾರ ಅನೇಕ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಅದನ್ನು ಮುಚ್ಚಿ ಹಾಕಲು ಈಗ ಹಳೆಯ ಕಡತಗಳನ್ನು ತೆಗೆಯುತ್ತಿದ್ದಾರೆ. ನಮಗೂ ಕೂಡ ಕಾನೂನಿನ ಮೂಲಕ ಉತ್ತರ ಕೊಡುವುದಕ್ಕೆ ಬರುತ್ತದೆ ಎಂದು ತಿರುಗೇಟು ನೀಡಿದರು.
ಮೂರು ಕಡೆ ಗೆಲುವು:
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನೂರಕ್ಕೆ ನೂರರಷ್ಟು ಖಚಿತ. ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿಯಲ್ಲಿ ನಮ ಅಭ್ಯರ್ಥಿಗಳು ಭಾರೀ ಬಹುಮತಗಳಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಎಲ್ಲಾ ಕಡೆ ಉತ್ತಮವಾದ ವಾತಾವರಣ ವ್ಯಕ್ತವಾಗಿದೆ. ಸರ್ಕಾರದ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರವನ್ನು ಏಕಾದರೂ ಅಧಿಕಾರಕ್ಕೆ ತಂದೆವೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಮೂರು ಕಡೆ ಗೆಲ್ಲುವುದರಲ್ಲಿ ಅನುಮಾನ ಬೇಡ ಎಂದು ಹೇಳಿದರು.
ಸಂಡೂರಿನಲ್ಲಿ ಸೋಲುವ ಭೀತಿಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನ ಜಾಂಡ ಹೂಡಿದ್ದಾರೆ. ಅವರು 30 ದಿನ ಕುಳಿತರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ. ಈ ಬಾರಿ ಮೊದಲ ಬಾರಿಗೆ ಬಿಜೆಪಿಯ ಕಮಲ ಹರಡುವುದು ನೂರಕ್ಕೆ ನೂರರಷ್ಟು ಖಚಿತ. ಸರ್ಕಾರ ಎಷ್ಟೇ ಅಧಿಕಾರ ದುರುಪಯೋಗಪಡಿಸಿಕೊಂಡರೂ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಎಚ್ಚರಿಸಿದರು.