Tuesday, October 21, 2025
Homeರಾಜ್ಯ1100 ಟನ್‌ ಕೆಎಂಎಫ್‌ ಸಿಹಿ ಉತ್ಪನ್ನಗಳ ದಾಖಲೆ ಮಾರಾಟ

1100 ಟನ್‌ ಕೆಎಂಎಫ್‌ ಸಿಹಿ ಉತ್ಪನ್ನಗಳ ದಾಖಲೆ ಮಾರಾಟ

Record sales of 1100 tonnes of KMF sweet products

ಬೆಂಗಳೂರು, ಅ.21- ಕೆಎಂಎಫ್‌ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಮೆಟ್ರಿಕ್‌ ಟನ್‌ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ 46 ಕೋಟಿ ರೂ.ಗಳ ದಾಖಲೆಯ ವಹಿವಾಟು ಮಾಡುವ ಮೂಲಕ ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ.38ರಷ್ಟು ವಹಿವಾಟಿನಲ್ಲಿ ಪ್ರಗತಿಯಾಗಿದ್ದು, ಇದು ಕೆಎಂಎಫ್‌ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು.

2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ 725 ಮೆಟ್ರಿಕ್‌ ಟನ್‌ ಸಿಹಿ ಉತ್ಪನ್ನಗಳನ್ನು ಮಾರಾಟ 33.48 ಕೋಟಿ ವಹಿವಾಟು ದಾಖಲಿಸಲಾಗಿತ್ತು. ಈ ಬಾರಿ ಹಬ್ಬದ ಅವಧಿಯ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ ಎರಡು ತಿಂಗಳು ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ ಒಂದು ಸಾವಿರ ಮೆಟ್ರಿಕ್‌ ಟನ್‌ ಮಾರಾಟ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನಂದಿನಿ ಬ್ರಾಂಡ್‌ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದರು.

ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಶುದ್ಧತೆ, ಗುಣಮಟ್ಟ ಹಾಗೂ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ನಂದಿನಿ ಬ್ರಾಂಡ್‌ಅನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಪ್ರತಿ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. 40ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್‌ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿತ್ತು ಎಂದರು.

ತುಪ್ಪ, ಬೆಣ್ಣೆ, ಪನ್ನೀರು, ಸಿಹಿ ತಿನಿಸು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 185ಕ್ಕೂ ಹೆಚ್ಚು ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ದೆಹಲಿ ಅಸ್ಸೋಂ, ದುಬೈ ಮತ್ತು ಸಿಂಗಾಪುರಗಳಿಗೂ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾರುಕಟ್ಟೆಯನ್ನು ವಿಸ್ತರಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ದೆಹಲಿಯಲ್ಲಿ ಒಂದು ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ ಎಂದ ಅವರು, ಮಧುಮೇಹಿಗಳು ಬಳಸುವಂತಹ ಮೂರು ಉತ್ಪನ್ನಗಳನ್ನು ಇತ್ತೀಚೆಗೆ ಕೆಎಂಎಫ್‌ ಬಿಡುಗಡೆ ಮಾಡಿದೆ ಎಂದರು.

ಕೆಎಂಎಫ್‌ ಆಡಳಿತಾಧಿಕಾರಿ ಕುಮಾರ್‌ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಪೂರ್ಣಗೊಂಡ ಬಳಿಕ ಕೆಎಂಎಫ್‌ ಅಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ, ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ಇಲ್ಲ, 784 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕಲಬೆರಕೆ ಇಲ್ಲ ಎಂಬುದು ದೃಢಪಟ್ಟಿದೆ. ನಕಲಿ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಬಗ್ಗೆ ದೂರುಗಳು ಬಂದಿಲ್ಲ. ಆದರೂ ನಕಲಿ ಮಾಡುವುದನ್ನು ತಪ್ಪಿಸಲು ಕ್ಯೂಆರ್‌ ಕೋಡ್‌ಅನ್ನು ಅಳವಡಿಸಲಾಗುತ್ತಿದೆ ಎಂದರು.

ನಂದಿನಿ ಪಾರ್ಲರ್‌ಗಳಲ್ಲಿ ಕೆಎಂಎಫ್‌ ಉತ್ಪನ್ನಗಳನ್ನು ಹೊರತುಪಡಿಸಿ
ಬೇರೆ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲೈಸೆನ್‌್ಸ ರದ್ದುಪಡಿಸಲಾಗುವುದು. ಈ ಸಂಬಂಧ ಪರಿಶೀಲನಾ ತಂಡಗಳನ್ನೂ ಕೂಡ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಕೆಎಂಎಫ್‌ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News