ನವದೆಹಲಿ : ಇಪ್ಪತ್ತೇಳು ವರ್ಷಗಳ ಬಳಿಕ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ರಾಷ್ಟ್ರ ರಾಜಧಾನಿ ನವದೆಹಲಿಗೆ ನೂತನ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ್ದು, ಮಹಿಳಾ ಸಬಲೀಕರಣಕ್ಜೆ ಒತ್ತು ನೀಡಿದೆ.
ಇನ್ನು ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರೀವಾಲ್ ಗೆ ಸೋಲಿನ ರುಚಿ ತೋರಿಸಿದ್ದ ಪರ್ವೇಶ್ ವರ್ಮ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಬುಧವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಂಜೆ 7 ಗಂಟೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಯಿತು.
ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಓಂ ಪ್ರಕಾಶ್ ಧಂಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಶಾಸಕಿಗೆ ಸಿಎಂ ಪಟ್ಟ ಕಟ್ಟಲಾಯಿತು. ಹಿರಿಯ ಶಾಸಕ ಮೋಹನ್ ಸಿಂಗ್ ಬಿಶ್ತ್ ಅವರು ಈ ಹೆಸರನ್ನು ಪ್ರಸ್ತಾಪಿಸಿದರು. ಇದನ್ನು ಎಲ್ಲಾ ಶಾಸಕರು ಅನುಮೋದಿಸಿದರು. ನಂತರ, ವೀಕ್ಷಕರು ರೇಖಾ ಗುಪ್ತಾ ಅವರ ಹೆಸರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿ, ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.
ರೇಖಾ ಅವರು ಬಿಜೆಪಿಯ ಎರಡನೇ ಮತ್ತು ದೆಹಲಿಯ ನಾಲ್ಕನೇ ಮಹಿಳಾ ಸಿಎಂ ಆಗಲಿದ್ದಾರೆ. ಇದಕ್ಕೂ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಕ್ಷದ ಅತಿಶಿ ದೆಹಲಿಯ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ರೇಖಾ ಗುಪ್ತಾ (ಶಾಲಿಮಾರ್ ಬಾಗ್ ಶಾಸಕಿ) ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದಾರೆ.
ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಜೆಯಾಗಿರುವ ರೇಖಾ ಗುಪ್ತಾ ಅವರು ಗುರುವಾರ ದೆಹಲಿಯಲ್ಲಿರುವ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದೆಹಲಿಯ ಲೆಫ್ಟ್ ನೆಂಟ್ ಜನರಲ್ ವಿ.ಕೆ ಸಕ್ಸೇನಾ ಅವರು ನೂತನ ಮುಖ್ಯಮಂತ್ರಿಗೆ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.
ರೇಖಾ ಗುಪ್ತಾ ಅವರು ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಎಎಪಿಯ ಬಂದಾನ ಕುಮಾರಿ ಮತ್ತು ಕಾಂಗ್ರೆಸ್‌ನ ಪರ್ವೀನ್ ಕುಮಾರ್ ಜೈನ್ ವಿರುದ್ಧ 29,595 ಮತಗಳ ಅಂತರದಿಂದ ಸ್ಥಾನವನ್ನು ಗೆದ್ದಿದ್ದಾರೆ.
27 ವರ್ಷಗಳ ನಂತರ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿಯು ಮಹಿಳಾ ಮತದಾರರನ್ನು ಓಲೈಸುವತ್ತ ಗಮನಹರಿಸಿದ್ದು, ಮಹಿಳೆಯರಿಗೆ ಮಾಸಿಕ 2,500 ರೂ., ಗರ್ಭಿಣಿಯರಿಗೆ 21,000 ರೂ. ಮತ್ತು ಹಿರಿಯರಿಗೆ ಪಿಂಚಣಿ ನೀಡುವ ಭರವಸೆಯೊಂದಿಗೆ ಪ್ರಣಾಳಿಕೆಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಬಿಜೆಪಿಯ ಭರವಸೆಗಳು ಎಎಪಿಯನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸಂಸದೀಯ ಸದಸ್ಯರು ‘ಪಂಜಾಬಿ’ ಮತ್ತು ‘ಬನಿಯಾ’ ಸಮುದಾಯಗಳಿಂದ ಸಿಎಂ ಸಂಭಾವ್ಯರ ಹೆಸರುಗಳನ್ನು ಚರ್ಚಿಸಿದ್ದರು ಎನ್ನಲಾಗಿದೆ.
ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿದಾಗಿನಿಂದಲೂ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಶ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಸಿಎಂ ರೇಸ್ನಲ್ಲಿ ಕೇಳಿ ಬಂದಿದ್ದವು.
ಸಾಮಾನ್ಯವಾಗಿ ಬಿಜೆಪಿ ಚುನಾವಣೆಗೂ ಮುಂಚೆ ಯಾವುದೇ ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡುವುದಿಲ್ಲ. ಇದೇ ಮಾದರಿಯನ್ನು ಕೇಂದ್ರಾಡಳಿತ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
ಫೆಬ್ರವರಿ 20ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ:
ಇನ್ನು ದೆಹಲಿಯ ನೂತನ ಮುಖ್ಯಮಂತ್ರಿ ಹಾಗೂ ಸಚಿವರು ಫೆಬ್ರವರಿ 20ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಹೇಳಿದೆ. ಫೆಬ್ರವರಿ 20ಕ್ಕೆ ಅಂದರೆ ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ದೆಹಲಿ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ಭರ್ಜರಿ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ.
ಇನ್ನು ದೆಹಲಿಯಲ್ಲಿ ಈ ಹಿಂದೆ ಬಿಜೆಪಿಯ ಮಹಿಳಾ ಮುಖ್ಯಮಂತ್ರಿ ಇದ್ದರು. ದೆಹಲಿಯಲ್ಲಿ 1998ರಲ್ಲಿ ಸುಷ್ಮಾ ಸ್ವರಾಜ್ ಅವರು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು. ಈ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು. ಆದರೆ, ದೆಹಲಿಯಲ್ಲಿ ಅವರು ಅಧಿಕಾರ ನಡೆಸಿದ್ದು ಕೇವಲ 52 ದಿನಗಳು ಮಾತ್ರ. ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿಗೆ ದೊಡ್ಡ ಇತಿಹಾಸವೇ ಇದೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಬರೋಬ್ಬರಿ ಮೂರು ಅವಧಿಯಲ್ಲೂ ಅಂದರೆ 15 ವರ್ಷಗಳ ಕಾಲ ಆಡಳಿತ ನಡೆಸಿದ್ದರು.
ದೆಹಲಿಯಲ್ಲಿ ದೇಶದ ಸ್ಟಾರ್ಟ್ ಅಪ್ ಪಾರ್ಟಿ ಅಂತಲೇ ಹೇಳಲಾಗುವ ಆಮ್ ಆದ್ಮಿ ಪಾರ್ಟಿಯು ಕಳೆದ ಎರಡು ಅವಧಿಯಿಂದ ಅಧಿಕಾರ ನಡೆಸಿತ್ತು. ಈ ಅವಧಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಒಂದು ಅವಧಿಗೆ ಪೂರ್ಣ ಪ್ರಮಾಣದ ಆಡಳಿತ ನಡೆಸಿದ್ದರೆ. ಮತ್ತೊಂದು ಅವಧಿಗೂ ಸಿ.ಎಂ ಆಗಿದ್ದರು. ಆದರೆ, ಮದ್ಯನೀತಿ ಹಗರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅತಿಶಿ ಸಿಂಗ್ ಅವರು ದೆಹಲಿಯಲ್ಲಿ ಕೊನೆಯ ಐದು ತಿಂಗಳು ಆಡಳಿತ ನಡೆಸಿದ್ದರು.
ನವದೆಹಲಿಯಲ್ಲಿರುವ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಗುರುವಾರ ಬೆಳಗ್ಗೆ 11:30ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
ವಿಶೇಷ ಎಂದರೆ, ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಮೊದಲ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿದ್ದ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರೀವಾಲ್ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಇದೇ ಸ್ಥಳದಲ್ಲಿ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿ ಬಿಜೆಪಿ ಆಡಳಿತ ರಾಜ್ಯಗಳ ಸಿಎಂಗಳು, ಪ್ರಮುಖ ನಾಯಕರು, ಸಾಧು ಸಂತರು, ಸಿನಿಮಾ ತಾರೆಗಳು ಭಾಗಿಯಾಗುವ ಸಾಧ್ಯತೆಯಿದೆ.
ಒಡಿಶಾದಲ್ಲಿ ಮುಖ್ಯಮಂತ್ರಿಯನ್ನು ಹೆಸರಿಸಲು ಬಿಜೆಪಿ 7 ದಿನಗಳನ್ನು ತೆಗೆದುಕೊಂಡಿತು. ಒಂಬತ್ತನೇ ದಿನದಂದು ಭಜನ್‍ಲಾಲ್ ಶರ್ಮಾ ಅವರಿಗೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆ ನೀಡಲು ಅನುಮೋದನೆ ನೀಡಲಾಯಿತು. ಅದೇ ರೀತಿ, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಅವರ ಹೆಸರನ್ನು ಅಂತಿಮಗೊಳಿಸಲು 8 ದಿನಗಳು ಬೇಕಾಯಿತು.
ಛತ್ತೀಸ್‍ಗಢದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿಗೆ 7 ದಿನಗಳು ಬೇಕಾಯಿತು ಆದರೆ ದೆಹಲಿಯಲ್ಲಿ ಈ ಎಲ್ಲಾ ದಾಖಲೆಗಳು ಮುರಿದುಹೋಗಿವೆ ಮತ್ತು 11 ನೇ ದಿನದಂದು ಮುಖ್ಯಮಂತ್ರಿಯ ಹೆಸರು ತಿಳಿಯಲಿದೆ. ಫೆಬ್ರವರಿ 8 ರಂದು ದೆಹಲಿ ಜನರು ತಮ ಜನಾದೇಶವನ್ನು ನೀಡಿದ್ದಾರೆ. ದೆಹಲಿಯ ಜನರು ಪ್ರಧಾನಿ ಮೋದಿ ನೀಡಿದ ಭರವಸೆಯನ್ನು ನಂಬಿದ್ದಾರೆ ಮತ್ತು ಬಿಜೆಪಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿದೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ದೆಹಲಿಯ ಬಿಜೆಪಿ ಸರ್ಕಾರ ಮೊದಲು ಯಮುನಾ ನೀರನ್ನು ಸ್ವಚ್ಛಗೊಳಿಸಿ ನಂತರ ನದಿ ಮುಂಭಾಗ ಮತ್ತು ಹಸಿರು ಕಾರಿಡಾರ್ ನಿರ್ಮಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಜಲ ಮೆಟ್ರೋ ಸಾಧ್ಯತೆಯನ್ನು ಪ್ರಧಾನಿ ಮೋದಿ ನಿರಾಕರಿಸಲಿಲ್ಲ, ಅಂದರೆ ದೆಹಲಿಯ ಅಭಿವೃದ್ಧಿಯ ನೀಲನಕ್ಷೆಯ ಬಗ್ಗೆ ಪ್ರಧಾನಿ ಮೋದಿಯವರ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ.
ಈಗ ಉಳಿದಿರುವ ಒಂದೇ ಪ್ರಶ್ನೆ ಎಂದರೆ ರಾಜಧಾನಿಯಲ್ಲಿ ಬಿಜೆಪಿಯ ಈ ಭರವಸೆಗಳನ್ನು ಯಾರು ನಿಜವಾಗಿಸುತ್ತಾರೆ ಎಂಬುದು.ಅಷ್ಟಕ್ಕೂ, ದೆಹಲಿಯಲ್ಲಿ ಅಹಮದಾಬಾದ್‍ನಂತಹ ನದಿ ದಂಡೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಯಾರ ಹೆಗಲ ಮೇಲೆ ಹಾಕುತ್ತಾರೆ? ಎಂಬುದು. ಮುಖ್ಯಮಂತ್ರಿ ಆಯ್ಕೆ ಮಾಡಲು ಪಕ್ಷ ಏಕೆ ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದೆ ಎಂದು ಎಎಪಿ ನಿರಂತರವಾಗಿ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ.