Thursday, October 30, 2025
Homeರಾಜ್ಯಹಂತಹಂತವಾಗಿ ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆ : ಸಚಿವ ಸತೀಶ್‌ ಜಾರಕಿಹೊಳಿ

ಹಂತಹಂತವಾಗಿ ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆ : ಸಚಿವ ಸತೀಶ್‌ ಜಾರಕಿಹೊಳಿ

Release of pending bills of contractors in phases: Minister Satish Jarkiholi

ಬೆಂಗಳೂರು, ಅ.30- ಕಳೆದ ಎರಡೂವರೆ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಿಂದ ಉತ್ತಮ ಕೆಲಸಗಳಾಗಿವೆ. ಸಾರ್ವಜನಿಕರು ಗುತ್ತಿಗೆದಾರರನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದ್ದು, ಬಾಕಿ ಬಿಲ್‌ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಚಿವರಾಗಿ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇವೆ. ಗುತ್ತಿಗೆದಾರರ ಬಾಕಿ ಬಿಲ್‌ 9 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಇನ್ನೂ ಸಮಯಬೇಕು. ಈ ಮೊತ್ತವನ್ನು ಬಜೆಟ್‌ನಲ್ಲಿ ನಿಗದಿ ಮಾಡದೇ ಕಾಮಗಾರಿ ಮಂಜೂರು ಮಾಡಲಾಗಿದೆ. ಹಣ ಹೊಂದಿಸಿ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ ಎಂದು ಹೇಳಿದರು.

- Advertisement -

ಒಟ್ಟು 12 ಸಾವಿರ ಕೋಟಿ ರೂ.ಗಳನ್ನು ಈ ರೀತಿ ಮಂಜೂರು ಮಾಡಲಾಗಿತ್ತು. ಅದರಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಪಾವತಿಸಿದ್ದೇವೆ. ಬಾಕಿಯಿರುವ 9 ಸಾವಿರ ಕೋಟಿ ರೂ.ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಹೇಳಿದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ. ಯಾರೂ ಕೂಡ ಅಧ್ಯಕ್ಷ ಸ್ಥಾನವನ್ನು ಕೇಳುತ್ತಿಲ್ಲ. ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಸ್ವಾಗತಿಸುತ್ತೇವೆ ಎಂದರು.

ನಾಯಕತ್ವ ಬದಲಾವಣೆಯ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಪ್ರಶ್ನೆಗಳು ಎದುರಾದಾಗ ಉತ್ತರ ನೀಡದೇ ಸಚಿವರು ಓಡಿ ಹೋಗಲು ಸಾಧ್ಯವಿಲ್ಲ. ಒಂದೆಡೆ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಮತ್ತೊಂದೆಡೆ ಸರ್ಕಾರ ಮತ್ತು ಪಕ್ಷದಲ್ಲಿ ಗೊಂದಲಗಳು ಇವೆ ಎಂಬ ಅಪಪ್ರಚಾರವನ್ನೂ ನಡೆಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ನಾನು ಒಬ್ಬ ಸದಸ್ಯ. ಸಂಪುಟ ಪುನರ್‌ ರಚನೆಯ ಬಗ್ಗೆ ನಾನು ಹೇಳಿಕೆ ನೀಡಲು ಸಾಧ್ಯವಿಲ್ಲ. ಕೆ.ಎನ್‌.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅಥವಾ ಸೇರಿಸಿಕೊಳ್ಳದೇ ಇರುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ ಹಾಗೂ ನಾನು 30 ವರ್ಷಗಳಿಂದಲೂ ಪದೇ ಪದೇ ಸಭೆ ಮಾಡುತ್ತಿರುತ್ತೇವೆ. ಕಾಂಗ್ರೆಸ್‌‍ಗೆ ಬಂದ ಮೇಲೆ ಡಾ.ಜಿ.ಪರಮೇಶ್ವರ್‌ ಸೇರಿಕೊಂಡಿದ್ದಾರೆ.

ತಾವು ಊರಿನಲ್ಲಿ ಇಲ್ಲದೇ ಇದ್ದಾಗ ನನ್ನನ್ನು ಹೊರತು ಪಡಿಸಿ ಸಭೆ ನಡೆಸಿರಬಹುದು. ಈ ಮೊದಲು ಚರ್ಚೆ ಮಾಡಿದ ವಿಷಯಗಳ ಬಗ್ಗೆ ಮತ್ತಷ್ಟು ವಿಶ್ಲೇಷಣೆಗಳು ನಡೆದಿರುತ್ತವೆ ಅಥವಾ ಇನ್ನಷ್ಟು ಹೊಸ ವಿಷಯಗಳನ್ನು ಪ್ರಸ್ತಾಪಿಸಬಹುದು ಎಂದು ಹೇಳಿದರು.

ಧರ್ಮಸ್ಥಳದ ತನಿಖೆಯ ಬಗ್ಗೆ ನಾನು ಹೇಳಿಕೆ ನೀಡಲು ಬಯಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯಿಸಬಹುದು. ಸಂಚು ನಡೆಸಿದವರೇ ತನಿಖೆ ರದ್ದು ಪಡಿಸುವಂತೆ ಕೋರ್ಟ್‌ ಮೆಟ್ಟಿಲೇರಿರುವ ಬಗ್ಗೆ ನ್ಯಾಯಾಲಯದ ತೀರ್ಪನ್ನು ಕಾದು ನೋಡಬೇಕಿದೆ ಎಂದರು. ಮತಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಾದಂತ ಸಹಿಸಂಗ್ರಹ ಅಭಿಯಾನ ನಡೆಯುತ್ತಿದೆ.

ಕಾಂಗ್ರೆಸ್‌‍ ಕಚೇರಿ ನಿರ್ಮಾಣಕ್ಕೆ ಎಲ್ಲಾ ತಾಲ್ಲೂಕುಗಳಲ್ಲೂ ಜಾಗ ನೀಡುವುದು ಮತ್ತು ಕಟ್ಟಡ ನಿರ್ಮಿಸುವುದು ಪಕ್ಷದ ದೃಷ್ಟಿಯಿಂದ ಒಳ್ಳೆಯದು. 100 ಕಚೇರಿಗಳನ್ನು ನಿರ್ಮಿಸಲು ಅಧ್ಯಕ್ಷರು ಪ್ರಯತ್ನ ಮಾಡುತ್ತಿದ್ದಾರೆ. ಸಹಕಾರ ನೀಡದೆ ಇರುವ ಸಚಿವರು ಮತ್ತು ಶಾಸಕರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸುವುದಾಗಿ ಹೇಳಿರುವ ಮಾಹಿತಿ ನನಗಿಲ್ಲ ಎಂದರು.

- Advertisement -
RELATED ARTICLES

Latest News