ಚಿತ್ರದುರ್ಗ,ಆ.26- ತಮ್ಮ ಪುತ್ರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಜೈಲಿನಲ್ಲಿದ್ದಾರೋ ಅಥವಾ ರೆಸಾರ್ಟ್ನಲ್ಲಿದ್ದಾರೋ ಎಂಬ ಅನುಮಾನ ಮೂಡುತ್ತಿದೆ. ಜೈಲಿನಲ್ಲಿನ ವಾತಾವರಣದ ಬಗ್ಗೆ ಬಹಿರಂಗಗೊಂಡಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದರೆ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಕಾಶಿನಾಥಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ತಮ ಪುತ್ರ ರೇಣುಕಾಸ್ವಾಮಿ ಕೊಲೆಗೆ ಸರ್ಕಾರ ಹಾಗೂ ನ್ಯಾಯಾಂಗದಿಂದ ನ್ಯಾಯ ಸಿಗಬಹುದೆಂಬ ನಂಬಿಕೆ ಇತ್ತು. ಈಗ ಬಿಡುಗಡೆಯಾಗಿರುವ ಪೋಟೋ, ವಿಡಿಯೋ ನೋಡಿದರೆ ಆಘಾತವಾಗಿದೆ. ಜೈಲಿನಲ್ಲಿ ಆರೋಪಿಗಳಿಗೆ ರಾಜ್ಯಾತಿಥ್ಯ ದೊರೆಯುತ್ತಿದೆ. ಆರೋಪಿಗಳು ಚರ್ಚೆ ಮಾಡಲು ಕುರ್ಚಿ ಟೇಬಲ್ಗಳನ್ನು ಹಾಕಲಾಗಿದೆ. ಟೀ ಕಪ್, ಸಿಗರೇಟ್ಗಳನ್ನು ಹಿಡಿದಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿಗಳ ತನಿಖೆಯ ಬಗ್ಗೆ ನಮಗೆ ನಂಬಿಕೆ ಇತ್ತು. ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಜೈಲಿನ ವಾತಾವರಣ ಗಾಬರಿಯಾಗುವಂತಿದೆ. ಕೈದಿಗಳಲ್ಲಿ ಶ್ರೀಮಂತ, ಬಡವ, ಸಾಹಿತಿ, ರಾಜಕಾರಣಿ ಎಂಬ ಬೇಧಭಾವ ಇರಬಾರದು. ಆದರೆ ದರ್ಶನ್ ಪ್ರಕರಣದಲ್ಲಿ ಲೋಪವಾಗಿದೆ. ಮುಖ್ಯಮಂತ್ರಿಯವರು ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿದರು.
ಜೈಲು ಅಧಿಕಾರಿಗಳ ಮೇಲೆ ಯಾವ ರೀತಿ ಒತ್ತಡ ಬಂದಿರಬಹು ದೆಂಬ ಅನುಮಾನ ಕಾಡುತ್ತಿದೆ. ದರ್ಶನ್ರಲ್ಲಿ ಪಶ್ಚಾತ್ತಾಪದ ಭಾವನೆ ಕಂಡುಬರುತ್ತಿಲ್ಲ. ನಗುತಾ ಆರಾಮಾಗಿದ್ದಾರೆ. ದರ್ಶನ್ ಅವರ ಹಿನ್ನಲೆ, ಜೈಲಿನ ವಾತಾವರಣ ಕುರಿತು ಸಮಗ್ರ ವಿಚಾರಣೆಯಾಗಬೇಕು. ಅದರಲ್ಲೂ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದಲೇ ವಿಚಾರಣೆಯಾಗಬೇಕು ಎಂದು ಒತ್ತಾಯಿಸಿದರು.
ತಮ ಪುತ್ರ ಕೈಮುಗಿದು ಬೇಡಿಕೊಂಡಾಗಲೂ ಕರುಣೆ ತೋರದೆ ಕೊಲೆ ಮಾಡಿದ ಆರೋಪಿಗಳಿಗೆ ಈಗ ಜೈಲಿನಲ್ಲಿ ಸುಖಾಸೀನ ಸೌಲಭ್ಯಗಳು ದೊರೆಯುತ್ತಿದೆ. ಇದನ್ನು ನೋಡಿದರೆ ತಮ ಪುತ್ರನ ಕೊಲೆಗೆ ನ್ಯಾಯ ದೊರೆಯುವುದೇ ಎಂಬ ಅನುಮಾನ ಕಾಡುತ್ತಿದೆ ಎಂದರು ಹೇಳಿದರು.