ಬೆಂಗಳೂರು, ಜು.24- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂದಿನ ಆಗಸ್ಟ್ ತಿಂಗಳ 2ನೇ ವಾರದಲ್ಲಿ ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪಣೆ ಸಲ್ಲಿಸಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣ್ನೋತ್ತರ ಪರೀಕ್ಷೆ ವರದಿ, ಆರೋಪಿಗಳ ಹೇಳಿಕೆಗಳು, ಪೊಲೀಸರು ಸಂಗ್ರಹಿಸಿರುವ 180 ಕ್ಕೂ ಹೆಚ್ಚು ಸಾಕ್ಷಗಳನ್ನೊಳಗೊಂಡಂತೆ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ನಡೆದು ಎರಡು ತಿಂಗಳು ಕಳೆದಿದೆ. ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 17 ಮಂದಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೈದರಾಬಾದಿಗೆ ಕಳುಹಿಸಿರುವ ವಿಡಿಯೋ ದಾಖಲೆಗಳ ವರದಿ ಬರಬೇಕಾಗಿದೆ. ಮೊಬೈಲ್ ರೀಟ್ರಿವ್ ವರದಿ ಪೊಲೀಸರ ಕೈಗೆ ಸಿಗಬೇಕಾಗಿದೆ. ಈ ಎಲ್ಲಾ ಮಾಹಿತಿಗಳು ಲಭ್ಯವಾದ ನಂತರ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ನಟ ದರ್ಶನ್ ಸೇರಿದಂತೆ ಆರೋಪಿಗಳ್ಯಾರೂ ಈವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.