ಬೆಂಗಳೂರು,ಸೆ.8- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಮತ್ತು ಸಂಗಡಿಗರು ನಾಳೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.ಕೊಲೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಪೊಲೀಸರು ಈಗಾಗಲೇ ನಗರದ 24 ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದಲೂ ಜೈಲಿನಲ್ಲಿರುವ ದರ್ಶನ್, ಈವರೆಗೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ದೋಷಾರೋಪಣ ಪಟ್ಟಿ ಸಲ್ಲಿಕೆಯ ಬಳಿಕ ಜಾಮೀನು ಅರ್ಜಿಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ದರ್ಶನ್ ಪರ ವಕೀಲರು ಹೇಳಿಕೆ ನೀಡಿದ್ದರು. ಕಳೆದ ಗುರುವಾರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ.
ಹೀಗಾಗಿ ದರ್ಶನ್ ಹಾಗೂ ಇತರ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ದೋಷಾರೋಪಣ ಪಟ್ಟಿ ಸಲ್ಲಿಕೆಗೆ ಮುನ್ನ ಜಾಮೀನು ಅರ್ಜಿ ಸಲ್ಲಿಕೆಯಾದರೆ ಆರೋಪಿಗಳು ಪ್ರಭಾವಿಗಳಾಗಿದ್ದು, ಸಾಕ್ಷಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಯೋಜಕರು ವಾದಿಸಿ ಜಾಮೀನಿಗೆ ಅಡ್ಡಿಪಡಿಸುವ ಸಾಧ್ಯತೆ ಇತ್ತು.
ಈಗ ತನಿಖೆ ಮುಗಿದಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಬಹುತೇಕ ಮಾನ್ಯಗೊಳ್ಳುವ ನಿರೀಕ್ಷೆಗಳಿವೆ. ಆದರೆ ದರ್ಶನ್‌ರ ನಡೆ ಕುತೂಹಲ ಕೆರಳಿಸಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೋ, ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.ಪ್ರಕರಣದಲ್ಲಿ ಬಂಧಿತರಾಗಿದ್ದ 17 ಮಂದಿ ಆರೋಪಿಗಳ ಪೈಕಿ ಕೆಲವರು ತುಮಕೂರು ಜೈಲಿನಲ್ಲಿದ್ದರೆ, ಇನ್ನು ಉಳಿದವರು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದರು.
ಜೈಲಿನಲ್ಲಿ ರೌಡಿಶೀಟರ್‌ಗಳು ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ತೀವ್ರ ವಿವಾದ ಸೃಷ್ಟಿಯಾಗಿ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ಅದೇ ರೀತಿ ಕೆಲವು ಆರೋಪಿಗಳನ್ನು ಶಿವಮೊಗ್ಗ, ಧಾರವಾಡ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.ಆರೋಪಿಗಳ ಪೈಕಿ ಕೆಲವರ ಕುಟುಂಬದ ಹಿನ್ನೆಲೆ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ವಕೀಲರಿಗೆ ಶುಲ್ಕ ಪಾವತಿಸುವ ಪರಿಸ್ಥಿತಿಯಲ್ಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರಿಗೆಲ್ಲಾ ದರ್ಶನ್‌ರೇ ವಕೀಲರ ಶುಲ್ಕ ಪಾವತಿಸಬೇಕಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಖ್ಯಾತ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸುವ ತಯಾರಿಯಲ್ಲಿದ್ದರು. ಆದರೆ ಶುಲ್ಕ ದುಬಾರಿಯಾಗಿದ್ದರಿಂದಾಗಿ ಖ್ಯಾತ ವಕೀಲರ ಕಾನೂನು ನೆರವು ಪಡೆಯುವ ಇರಾದೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.ನಾಳೆ ದರ್ಶನ್ ಹಾಗೂ ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಳ್ಳುತ್ತದೆ.
ಹೀಗಾಗಿ ಬೇರೆ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈ ನಡುವೆ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ಕೆಳ ಹಂತದ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ. ಹಿರಿಯ ವಕೀಲ ಟಾಮಿ ಸಬಾಸ್ಟೀನ್ ಮೂಲಕ ಪವಿತ್ರಾಗೌಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾಳೆ ಪವಿತ್ರಾಗೌಡ ಅವರ ಅರ್ಜಿ ವಿಚಾರಣೆಗೊಳಗಾಗುವ ಸಾಧ್ಯತೆ ಇದೆ. ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಾರೊ ಅಥವಾ ವಿಚಾರಣೆ ಪೂರ್ಣಗೊಳ್ಳುವವರೆಗೂ ಕಾಯುತ್ತಾರೋ ಎಂಬ ಕುತೂಹಲಗಳು ಹೆಚ್ಚಾಗಿವೆ.