ಕೆ.ಆರ್.ಪುರ, ಫೆ.7– ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಇ-ಖಾತೆಯಾಗದ ಖಾಲಿ ನಿವೇಶನ, ಬಡಾವಣೆ, ಬಹುಮಹಡಿ ಕಟ್ಟಡ, ವಿಲ್ಲಾಗಳು ಹಿಂದಿನ ಆದೇಶದಂತೆ ನೋಂದಣಿ ಮಾಡಿಕೊಳ್ಳಲು 6 ತಿಂಗಳುಗಳ ಕಾಲ ವಿಸ್ತರಣೆ ಮಾಡುವಂತೆ ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಆದೇಶದಂತೆ ಬಡಾವಣೆ ನಿರ್ಮಾಣಕ್ಕೆ ಹಾಗೂ ಬಹು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಇ-ಖಾತೆಗಳನ್ನು ಕಡ್ಡಾಯವಾಗಿಸಿದ್ದು, ಅದರಂತೆ ಸರ್ಕಾರವು 31 ಅಕ್ಟೋಬರ್ 2024ಕ್ಕೆ ಇ-ಖಾತೆ ರಹಿತ ಆಸ್ತಿಗಳಿಗೆ ಗಡುವು ನೀಡಿರುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಹಳಷ್ಟು ಮಂದಿ ರಿಯಲ್ ಎಸ್ಟೇಟ್ ನಂಬಿಕೊಂಡು ಉದ್ಯಮಿದಾರರು ಮತ್ತು ಇತರರು ಜೀವನ ಸಾಗಿಸುತ್ತಿದ್ದು, ಇದರಿಂದ ತೆರಿಗೆ ಹಾಗೂ ಕಂದಾಯದ ರೂಪದಲ್ಲಿ ಕೋಟ್ಯಾಂತರ ರೂಪಾಯಿಯ ಆದಾಯವೂ ಸರ್ಕಾರದ ಬೊಕ್ಕಸಕ್ಕೆ ಸಹ ಬರುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
ನೋಂದಣಿ ಮಾಡಿಕೊಳ್ಳಲು ಸಮಯಾವಕಾಶ ಬಹಳ ಕಡಿಮೆ ಇದ್ದಿದ್ದರಿಂದ ಬಡಾವಣೆಗಳಲ್ಲಿನ ನಿವೇಶನಗಳು, ಅಪಾರ್ಟ್ಮೆಂಟ್ಗಳು ಗಡುವಿನ ಒಳಗೆ ನೋಂದಣಿಯಾಗದೆ ಹಾಗೆಯೇ ಉಳಿದಿದ್ದು, ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿಗೆ ಇ-ಖಾತೆ ಕಡ್ಡಾಯ ಗೊಳಿಸಿರುವುದರಿಂದ ನೋಂದಣಿಯು ಸ್ಥಗಿತಗೊಂಡಿದೆ ಎಂದು ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಕನ್ನಡ ಮಿತ್ರ ವೆಂಕಟಪ್ಪ ಹೇಳಿದರು.
ಇದರಿಂದ ಸಣ್ಣ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಗಳಿಗೆ, ಸಾರ್ವಜನಿಕರಿಗೆ, ಮಾಲೀಕರಿಗೆ ಬಹಳ ತೊಂದರೆಯಾಗಿದ್ದು, ಸಾಕಷ್ಟು ಕೈ ಸಾಲ ಮತ್ತು ಬ್ಯಾಂಕ್ ಸಾಲಗಳನ್ನು ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆಯಾಗಿದೆ. ಇವುಗಳಿಂದ ಮನನೊಂದು ಆತಹತ್ಯೆಗೆ ಶರಣಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಬಂಡವಾಳದಾರರು ಹೊರ ರಾಜ್ಯಗಳಿಗೆ ವಲಸೆ ಹೋಗಿ ಬಂಡವಾಳ ಹೂಡುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪ್ರಸಾದ್, ಉಪಾಧ್ಯಕ್ಷ ರವೀಂದ್ರ, ಖಜಾಂಜಿ ಎ.ಅಶೋಕ್,ತಿರುಮಲ ನಾಯ್ಡು, ಇತರ ಪದಾಽ ಕಾರಿಗಳು ಉಪಸ್ಥಿತರಿದ್ದರು.