Sunday, September 8, 2024
Homeರಾಜ್ಯಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇಮಕದಲ್ಲಿ ಕರ್ನಾಟಕದ ಪ್ರಾತಿನಿಧ್ಯ ಕಡೆಗಣಿಸದಂತೆ ಮನವಿ

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇಮಕದಲ್ಲಿ ಕರ್ನಾಟಕದ ಪ್ರಾತಿನಿಧ್ಯ ಕಡೆಗಣಿಸದಂತೆ ಮನವಿ

ಬೆಂಗಳೂರು, ಜು.17- ದೇಶದ ಇತರ ರಾಜ್ಯಗಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ನೇಮಕ ಮಾಡುವಾಗ ಕರ್ನಾಟಕದ ಪ್ರಾತಿನಿಧ್ಯದ ಕೊರತೆ ನಿವಾರಿಸುವಂತೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಲ್ಲಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ ಮನವಿ ಮಾಡಿದ್ದಾರೆ.

ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿ ಅಸಮತೋಲನವನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೊಲಿಜಿಯಂನ ಮುಖ್ಯಸ್ಥರಾಗಿರುವ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರಿಗೆ ರಂಗನಾಥ ಅವರು ಪತ್ರ ಬರೆದಿದ್ದಾರೆ.

ನ್ಯಾಯಾಧೀಶರ ನೇಮಕಾತಿಯು ಹೆಚ್ಚು ಪಾರದರ್ಶಕ ಮತ್ತು ಅಂತರ್ಗತ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕರ್ನಾಟಕ ಸೇರಿದಂತೆ ಇತರ ಕಡಿಮೆ ಪ್ರಾತಿನಿಧ್ಯವಿರುವ ಪ್ರದೇಶಗಳಿಂದ ಅರ್ಹ ಅಭ್ಯರ್ಥಿಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ಸಂಘಟಿತ ಪ್ರಯತ್ನವಿರಬೇಕು ಎಂದು ಭಾವಿಸುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಭಾರತದಾದ್ಯಂತ ಇರುವ ಇತರ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯ ನೇಮಕಾತಿಯಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರ ಪ್ರಾತಿನಿಧ್ಯ ಕಡಿಮೆ ಇರುವ ಬಗ್ಗೆ ಕಳವಳದೊಂದಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯವು ಹಲವು ವರ್ಷಗಳಿಂದ ಹೆಚ್ಚು ಸಮರ್ಥ ಮತ್ತು ಅನುಭವಿ ನ್ಯಾಯಾಧೀಶರನ್ನು ಸೃಷ್ಟಿಸಿದೆ. ಅವರಲ್ಲಿ ಹಲವರು ತಮ್ಮ ಕಾನೂನು ಚಾತುರ್ಯ, ನ್ಯಾಯಾಂಗ ಮನೋಧರ್ಮ ಮತ್ತು ಸಂವಿಧಾನವನ್ನು ಎತ್ತಿಹಿಡಿಯುವ ಬದ್ಧತೆಯ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಇತರ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಯಾಗುವಾಗ ಕರ್ನಾಟಕದ ನ್ಯಾಯಾಧೀಶರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗ ನೇಮಕಾತಿಗಳ ಪ್ರಕ್ರಿಯೆಯು ಹಿರಿತನ, ಅರ್ಹತೆ ಮತ್ತು ಪ್ರಾದೇಶಿಕ ಸಮತೋಲನದ ಪರಿಗಣನೆಗಳನ್ನು ಒಳಗೊಂಡಿರುವ ಒಂದು ಸಂಕೀರ್ಣ ಪ್ರಕ್ರಿಯೆಯಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದು ರಂಗನಾಥ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
.

RELATED ARTICLES

Latest News