ಬೆಂಗಳೂರು,ಜು.11- ಭೌಗೋಳಿಕ ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಭಾಗಗಳಲ್ಲಿ ಡಿಫೆನ್ಸ್ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಸ್ರೇಲ್, ಇರಾನ್, ಉಕ್ರೇನ್, ರಷ್ಯಾ ಸೇರಿದಂತೆ ಹಲವಾರು ದೇಶಗಳ ನಡುವೆ ಸಂಘರ್ಷದ ವಾತಾವರಣವಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ವಲಯದ ಉತ್ಪಾದನೆಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. 4 ಮಿಲಿಯನ್ ಡಾಲರ್ ಆರ್ಥಿಕತೆಯನ್ನು ಒಳಗೊಂಡಿದೆ. ಬೆಂಗಳೂರು, ಕೋಲಾರ, ವಿಜಯಪುರ, ಬೆಳಗಾವಿ ಭಾಗಗಳಲ್ಲಿ ಡಿಫೆನ್ಸ್ ಪಾರ್ಕ್ ಸ್ಥಾಪನೆಗೆ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ವೇಳೆ ನಮ ಪ್ರಸ್ತಾವನೆಗೆ ಸಕಾರಾತಕ ಸ್ಪಂದನೆ ಸಿಕ್ಕಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ವಿಮಾನ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸಿದೆವು. ಆದರೆ ಅವರು ಇರಲಿಲ್ಲ. ಮತ್ತೆ ಮುಂದಿನ ವಾರ ದೆಹಲಿಗೆ ಭೇಟಿ ನೀಡಿ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ. ಎರಡನೇ ವಿಮಾನನಿಲ್ದಾಣದ ಸ್ಥಳ ನಿಗದಿಯ ಬಗ್ಗೆ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ತಿಳಿಸಿದರೆ ಮುಂದುವರೆದಂತಹ ಕೆಲಸಗಳಿಗೆ ಚಾಲನೆ ನೀಡಲು ಸಾಧ್ಯವಾಗುತ್ತದೆ ಎಂದರು.
ಈಗಾಗಲೇ ನೊಯ್ಡಾ ಹಾಗೂ ನೆವಿ ಮುಂಬೈನಲ್ಲಿರುವ ಹೆಚ್ಚಿವರಿ ವಿಮಾನನಿಲ್ದಾಣಗಳ ಮಾದರಿಯಲ್ಲೇ ಬೆಂಗಳೂರಿನಲ್ಲೂ ವಿಮಾನನಿಲ್ದಾಣ ನಿರ್ಮಿಸಲು ಎಲ್ಲಾ ರೀತಿಯ ತಯಾರಿಗಳನ್ನು ನಡೆಸುವುದಾಗಿ ಹೇಳಿದರು.
ದೇವನಹಳ್ಳಿಯ ರೈತರ ಹೋರಾಟಕ್ಕೆ ನಮ ಅಭ್ಯಂತರವಿಲ್ಲ. ಪ್ರಜಾಸತಾತಕವಾಗಿ ಎಲ್ಲರಿಗೂ ಪ್ರತಿಭಟಿಸುವ ಅಧಿಕಾರವಿದೆ. ಹೆಚ್ಚಿನ ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ. ರೈತರು ಭೂಮಿ ಸ್ವಾಧೀನವನ್ನು ಕೈಬಿಡಿ ಎನ್ನುತ್ತಿದ್ದಾರೆ. ಇದೇ 15 ರಂದು ನಡೆಯುವ ಸಭೆಯಲ್ಲಿ ಯಾವ ರೀತಿಯ ನಿರ್ಧಾರವಾಗಲಿದೆ ಎಂಬುದನ್ನು ನಾನು ಕಾದುನೋಡುತ್ತಿದ್ದೇನೆ ಎಂದರು.
ತಾವು ಮುಖ್ಯಮಂತ್ರಿ ಹುದ್ದೆಯ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಈ ಹಿಂದೆ ಜಲ ಸಂಪನೂಲ ಸಚಿವನಾಗಿದ್ದಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಈಗ ಸಚಿವನಾಗಿದ್ದೇನೆ. ಇಲಾಖೆಯಲ್ಲಿ ಧನಾತಕ ಬದಲಾವಣೆಗಳಾಗುತ್ತಿವೆ. ಅದನ್ನೆಲ್ಲಾ ಅರ್ಧಕ್ಕೆ ಬಿಟ್ಟು ಹೋಗುವುದು ಸರಿಯಲ್ಲ ಎಂದು ತಿಳಿಸಿದರು.
ಈ ಹಿಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ 178 ಸ್ಥಾನಗಳನ್ನು ಗೆದ್ದಿತ್ತು. ರಾಜ್ಯದಲ್ಲಿ ಶೇ.17 ರಷ್ಟಿರುವ ವೀರಶೈವ ಸಮುದಾಯ ಎಲ್ಲಾ ಸಮುದಾಯಗಳ ಜೊತೆ ವಿಶ್ವಾಸದಿಂದ ಹೊಂದಿಕೊಳ್ಳುತ್ತದೆ. ಮುಖ್ಯಮಂತ್ರಿ ಹುದ್ದೆ ಅಥವಾ ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ತಕ್ಕ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದರು.