ಶಿವಮೊಗ್ಗ, ಸೆ.14– ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ದುರಂತದಲ್ಲಿ ಮೃತರು ಮತ್ತು ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ಒಂದು ಸಮುದಾಯವನ್ನು ಓಲೈಕೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಕೇವಲ ಅಲ್ಪಸಂಖ್ಯಾತರು ಮಾತ್ರ ಕಾಣುತ್ತಿದ್ದಾರೆ.
ಆದರೆ, ಬೇರೆ ಸಮುದಾಯದವರು ಅವರಿಗೆ ಕಾಣುತ್ತಿಲ್ಲ. ಹಾಸನದ ಮೊಸಳೆಹೊಸಳ್ಳಿಯಲ್ಲಿ ನಡೆದ ಘೋರ ದುರಂತದಲ್ಲಿ ಅಮಾಯಕರು ಮೃತಪಟ್ಟಿದ್ದಾರೆ. ಅವರಿಗೆ ಹೆಚ್ಚಿನ ಪರಿಹಾರ ನೀಡಿ ಎಂದರೆ ಆಗುತ್ತಿಲ್ಲ ಎನ್ನುತ್ತಾರೆ.
ಇದು ಎಷ್ಟರ ಮಟ್ಟಿಗೆ ಸರಿ. ಮಂಡ್ಯದ ಮದ್ದೂರಿನಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಿರ್ಮಿಸುತ್ತಿದ್ದಾರೆ. ಇದರ ಬಗ್ಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಅವರು ಆರೋಪಿಸಿದರು.