ಬೆಂಗಳೂರು, ಮಾ.28- ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ಛಾಪು ಮೂಡಿಸಿದ್ದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಬಿ.ಎನ್. ಗರುಡಾಚಾರ್ (96) ಅವರು ಇಂದು ಮುಂಜಾನೆ ನಿಧನರಾದರು. ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಪೋಸ್ಟ್ ಆಫೀಸ್ ಹಿಂಭಾಗದ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.
ನಾಳೆ ಅವರ ಅಂತ್ಯ ಸಂಸ್ಕಾರ ವಿಲ್ಸನ್‌ಗಾರ್ಡನ್‌ನ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ದಕ್ಷ ಹಾಗೂ ಖಡಕ್ ಪೊಲೀಸ್ ಅಧಿಕಾರಿಯೆಂದೇ ಹೆಸರು ಮಾಡಿರುವ ಬಿ.ಎನ್.ಗರುಡಾಚಾರ್ ಅವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದವರು. ಇವರು 1976 ರಿಂದ 1980ರ ವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿ ಹಲವು ಪರಿಣಾಮಕಾರಿ ಯೋಜನೆ ಜಾರಿಗೆ ತಂದರು.
ಅಪರಾಧ ತಡೆಗಟ್ಟಿ ಬೆಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ಒಳ್ಳೆಯ ಹೆಸರು ಗಳಿಸಿದ್ದರು. ಬೆಂಗಳೂರಿನ ಮೊದಲ ಕಮಿಷನರ್ ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು, ಎನ್.ಆರ್. ಜಂಕ್ಷನ್ (ಎಲ್‌ಐಸಿ ಕಚೇರಿ ಬಳಿ)ನಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದರು. ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದ ಅವರು, ನಂತರ ಬೆಂಗಳೂರು ನಗರ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದು, ರಾಜ್ಯದ ಡಿಜಿ ಮತ್ತು ಐಜಿಪಿಯಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ಪುತ್ರ ಉದಯ್ ಗರುಡಾಚಾರ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು.