ರಾಯಚೂರು,ಜೂ.4- ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ತಮ್ಮ ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಕುಮಾರ್ ನಾಯಕ್ ಸಾಕಷ್ಟು ಹೆಸರು ಮಾಡಿದ್ದರು.
ನಿವೃತ್ತಿಯ ಬೆನ್ನಲ್ಲೇ ಅಚ್ಚರಿ ಎಂಬಂತೆ ಕಾಂಗ್ರೆಸ್‌ನಿಂದ ಬಿ ಫಾರಂ ಪಡೆದುಕೊಂಡಿದ್ದರು.ರಾಯಚೂರು ಲೋಕಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ ನಾಯ್ಕ ಅವರ ವಿರುದ್ಧ ಕುಮಾರ್ ನಾಯಕ್‌ಶೇ.52ರಷ್ಟು ಮತ ಪಡೆದುಕೊಂಡು ಆಯ್ಕೆಯಾಗಿದ್ದಾರೆ.
ರಾಯಚೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಹಿರಿಯ ರಾಜಕಾರಣಿ ರಾಜ ಅಮರೇಶ್ ನಾಯಕ ಅವರನ್ನು ಸೋಲಿಸುವ ಸವಾಲನ್ನು ತೆಗೆದುಕೊಂಡು ಅಖಾಡಕ್ಕಿಳಿದ ಕುಮಾರ್ ನಾಯಕ್ ಕಾಂಗ್ರೆಸಿಗರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು. ಯಾವುದೇ ವಿವಾದಗಳಿಲ್ಲದೆ ಸರ್ಕಾರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಕುಮಾರ್ ನಾಯಕ್ ಈಗ ರಾಜ್ಯ ರಾಜಕಾರಣದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.