ಕಲಬುರಗಿ, ಸೆ.17- ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿದ್ದು ರೈತರ ಅನುಕೂಲಕ್ಕಾಗಿ ಬೆಳೆ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸಂಭವಿಸಿರುವ ಬೆಳೆಹಾನಿಯನ್ನು ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ
ನಡೆಸಲು ಆದೇಶಿಸಲಾಗಿದೆ. ವಾರದಲ್ಲಿ ಈ ಸಮೀಕ್ಷೆ ಪೂರ್ಣಗೊಂಡು ವರದಿ ಸಲ್ಲಿಕೆಯಾಗಲಿದೆ. ಆ ಬಳಿಕ ಬೆಳೆನಷ್ಟ ಪರಿಹಾರ ಪಾವತಿಸುವುದಾಗಿ ಹೇಳಿದರು.
ಈ ಬಾರಿ ಅದೃಷ್ಟವಶಾತ್ ರಾಜ್ಯದ ಹಲವು ಕಡೆ ವಾಡಿಕೆಗಿಂತ ಶೇ. 4ರಷ್ಟು ಹೆಚ್ಚು ಮಳೆಯಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಸೇರಿ ಹಲವಾರು ಜಿಲ್ಲೆಗಳಲ್ಲಿ ಬೆಳೆನಷ್ಟ ಹೆಚ್ಚಾಗಿದೆ. ಕೂಡಲೇ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳೆ ನಷ್ಟದ ಬಗ್ಗೆ ಮಧ್ಯಂತರ ವರದಿ ಪಡೆದಿಲ್ಲ. ಜಂಟಿ ಸಮೀಕ್ಷೆಯ ಅಂತಿಮ ವರದಿ ಪಡೆದು, ಬಳಿಕ ಕ್ರಮ ಕೈಗೊಳ್ಳಲಾಗುವುದು. 2024-25ನೇ ಸಾಲಿಗೆ ಬೆಳೆವಿಮೆ ಯೋಜನೆಯಡಿ 656 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಇದು ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಬೆಳೆ ವಿಮೆ ಯೋಜನೆಯನ್ನು ಹೊಂದಿಲ್ಲದವರಿಗೂ ಪರಿಹಾರ ಪಾವತಿಯ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ಈ ಹಿಂದೆ ಕೇಂದ್ರ ಸರ್ಕಾರ ನಮಗೆ ಬರ ಪರಿಹಾರದ ಹಣ ನೀಡಲಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗಿ ಹೋರಾಟದ ಮೂಲಕ ನಾವು ಪರಿಹಾರ ಪಡೆದುಕೊಂಡಿದ್ದೆವು ಎಂದರು.
ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಬದಲಾವಣೆ ಮಾಡಿ ಪ್ರಕೃತಿ ವಿಕೋಪ ನಷ್ಟ ಪರಿಹಾರವನ್ನು ಹೆಚ್ಚಿಸಬೇಕೆಂದು ಹಲವಾರು ಬಾರಿ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರೋಡೆಕಾರರ ಕಾರು ಪತ್ತೆ:
ವಿಜಯಪುರದಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಬಳಸಿದ್ದ ಕಾರು ಪತ್ತೆಯಾಗಿದೆ. ಕೂಡಲೇ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ವಿಜಯಪುರ ಎಸ್‌ಪಿ ಅವರಿಗೆ ಕರೆ ಮಾಡಿ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಆದೇಶಿಸಿರುವುದಾಗಿಯೂ ಹೇಳಿದರು.
ಬ್ಯಾಂಕ್‌ಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವುದು ಹಾಗೂ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸುವುದು ಬ್ಯಾಂಕ್‌ಗಳ ಜವಾಬ್ದಾರಿ. ಸರ್ಕಾರ ಪೊಲೀಸರಿಂದ ಅಗತ್ಯ ಭದ್ರತೆಯನ್ನು ಒದಗಿಸುತ್ತದೆ ಎಂದರು.
ಅರ್ಹರನ್ನು ತೆಗೆಯುವುದಿಲ್ಲ:
ಬಿಪಿಎಲ್ ಪಟ್ಟಿಯಲ್ಲಿರುವ ಅನರ್ಹರನ್ನು ಪರಿಶೀಲಿಸಿ ತೆಗೆದು ಹಾಕಬೇಕು. ಅರ್ಹರಿದ್ದರೆ ಅವರಿಗೆ ಬಿಪಿಎಲ್ ಕಾರ್ಡ್‌ಗಳನ್ನು ಹೊಸದಾಗಿ ನೀಡಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬಿಜೆಪಿಯವರು ಹೇಳಿದಂತೆ ಕೇಳುವುದಿಲ್ಲ:
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಷಯದಲ್ಲಿ ಬಿಜೆಪಿ ನಾಯಕರು ಹಾಗೂ ವಿರೋಧಪಕ್ಷ ನಾಯಕ ಆರ್.ಅಶೋಕ್ ಹೇಳಿದಂತೆಲ್ಲಾ ಕೇಳಲು ಸಾಧ್ಯವಿಲ್ಲ. ಅವರು ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.ರಾಜ್ಯದ ಪ್ರತಿಯೊಬ್ಬರನ್ನು ಸಮೀಕ್ಷೆ ನಡೆಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಈ ದತ್ತಾಂಶಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಧರ್ಮದ ಜೊತೆಗೆ ಜಾತಿಯ ಉಪ ಕಾಲಂಗಳನ್ನು ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಅನಗತ್ಯ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಈ ದೇಶದ ಪ್ರಜೆಗಳಲ್ಲವೇ? ಎಂದು ಪ್ರಶ್ನಿಸಿದರು.
ಸಮೀಕ್ಷೆಯಲ್ಲಿ ಜನ ನೀಡುವ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದಕ್ಕಾಗಿ 1.75 ಲಕ್ಷ ಶಿಕ್ಷಕರನ್ನು ಸಮೀಕ್ಷೆಗಾಗಿ ನಿಯೋಜಿಸಲಾಗಿದೆ. ಪ್ರತಿಯೊಬ್ಬರಿಗೂ 150 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
ವಿರೋಧ ಅನಗತ್ಯ:
ಕುರುಬ ಸಮುದಾಯವನ್ನು ಎಸ್‌ಟಿ ಮೀಸಲು ಪಟ್ಟಿಗೆ ಸೇರಿಸಲು ಈ ಹಿಂದಿನ ಬಿಜೆಪಿ ಸರ್ಕಾರವೇ ಪ್ರಕ್ರಿಯೆ ಆರಂಭಿಸಿತ್ತು. ನಾವು ಅದನ್ನು ಮುಂದುವರೆಸಿದ್ದೇವೆ. ರಾಜ್ಯ ಸರ್ಕಾರಕ್ಕೆ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಷ್ಟೇ. ಅಂತಿಮ ತೀರ್ಮಾನವನ್ನು ಕೇಂದ್ರ ಸರ್ಕಾರ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂದರು.
ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಪರಿಶೀಲಿಸಿದ ಬಳಿಕ ಕುರುಬ ಸಮುದಾಯ ಎಸ್‌ಟಿಗೆ ಸೇರಲು ಅವಕಾಶಗಳಿದ್ದರೆ, ಕ್ರಮ ಕೈಗೊಳ್ಳುತ್ತದೆ. ಇಲ್ಲವಾದರೆ ತಿರಸ್ಕರಿಸುತ್ತದೆ. ಈ ವಿಚಾರಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದರು.ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲಾಗಿದೆ. ಅದು ಈ ಭಾಗದಲ್ಲೇ ಇರಲಿದ್ದು, ಅಭಿವೃದ್ಧಿಗೆ ಹೆಚ್ಚಿನ ವೇಗ ದೊರಕಿಸುತ್ತದೆ ಎಂದು ಹೇಳಿದರು.