ಬೆಂಗಳೂರು,ಜ.4-ಆರ್ಥಿಕ ಸಂಕಷ್ಟದಿಂದ ರಾಜ್ಯದ ನಾಲ್ಕು ನಿಗಮಗಳಲ್ಲಿ ಏರಿಕೆಯಾಗಿದ್ದ ಬಸ್ ದರ ಪ್ರಯಾಣ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಮಧ್ಯರಾತ್ರಿ 11 ಗಂಟೆಯಿಂದ ನೂತನ ದರ ಪರಿಷ್ಕರಣೆಯಾಗಿದ್ದು, ಭಾನುವಾರದಿಂದ ಹೊಸ ದರ ಜಾರಿಗೆ ಬರಲಿದೆ. ಕೆಎಸ್ಆರ್ಟಿಸಿ ಕಲ್ಯಾಣ ಕರ್ನಾಟಕ, ವಾಯುವ್ಯ ಮತ್ತು ಬಿಎಂಟಿಸಿಗಳಲ್ಲಿ ಭಾನುವಾರದಿಂದಲೇ ಹೊಸ ದರ ಅನ್ವಯವಾಗಲಿದ್ದು, ಪ್ರಯಾಣಿಕರ ಜೇಬಿಗೆ ಶೇ.15ರಷ್ಟು ಕತ್ತರಿ ಪ್ರಯೋಗವಾಗಲಿದೆ.
ಹಾಲಿ ಇದ್ದ ದರಕ್ಕೆ 15% ಏರಿಕೆಯಾಗಲಿದ್ದು, ಶಕ್ತಿ ಯೋಜನೆಯಿಂದ ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಲಾಭಕ್ಕಿಂತ ಹೆಚ್ಚಾಗಿ ಕಡೆಪಕ್ಷ ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಈವರೆಗೂ ಬೆಂಗಳೂರಿನಿಂದ ಮೈಸೂರಿಗೆ 170 ರೂ. ಇತ್ತು. ಇನ್ನು ಮುಂದೆ ಈ ದರವು 197 ರೂ.ಗೆ ಹೆಚ್ಚಳವಾಗಲಿದೆ. ಇದೇ ರೀತಿ ಬೆಂಗಳೂರಿನಿಂದ ಹಾಸನಕ್ಕೆ 238 ರೂ. ಇದ್ದ ದರವು 274ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಈ ಮೊದಲು 385 ರೂ. ಇತ್ತು. ನೂತನ ಪರಿಷ್ಕರಣೆ ಪರಿಣಾಮ 441 ರೂ.ಗೆ ಅದೇ ರೀತಿ ಬೆಂಗಳೂರು-ಶಿವಮೊಗ್ಗ ನಡುವೆ 375 ರೂ. ಇದ್ದ ಪ್ರಯಾಣ ದರ ಈಗ 427 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ದಾವಣಗೆರೆ ನಡುವೆ 375 ರೂ. ಇದ್ದ ದರವು ಈಗ 445ಕ್ಕೆ ಏರಿಕೆಯಾದರೆ, ಬೆಂಗಳೂರು-ಚಿಕ್ಕಮಗಳೂರು ನಡುವೆ 350 ರೂ. ಇದ್ದ 390ಕ್ಕೆ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ನಾಲ್ಕು ನಿಗಮಗಳ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಹೊರತುಪಡಿಸಿದರೆ ಉಳಿದ ಎರಡು ನಿಗಮಗಳು ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ವೇತನ ನೀಡಲು ಪರದಾಡಬೇಕಾದ ಸ್ಥಿತಿ ಇತ್ತು.
ಇದರ ನಡುವೆ ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿರುವ ಕಾರಣ ನಿಗಮಗಳಿಗೆ ಡೀಸೆಲ್ ಹೊರೆಯಾಗುತ್ತಿತ್ತು. ಇದನ್ನು ಸರಿದೂಗಿಸಲು ರಾಜ್ಯ ಸರ್ಕಾರ ಸಾರ್ವಜನಿಕರ ವಿರೋಧದ ನಡುವೆಯೂ ಟಿಕೆಟ್ ದರ ಪರಿಷ್ಕರಣೆ ಮಾಡುವ ತೀರ್ಮಾನಕ್ಕೆ ಬಂದಿತ್ತು.
ದರ ಹೆಚ್ಚಳದಿಂದ ನಿತ್ಯ 7.84 ಕೋಟಿ ರೂ. ಆದಾಯ ಹೆಚ್ಚಳವಾಗುವ ಸಾಧ್ಯತೆ ಇದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಈ ಹಿಂದೆ ಶೇ. 40ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು.
ಬಿಎಂಟಿಸಿ ಬಸ್ ದರಗಳನ್ನು 2015ರಲ್ಲಿ ಮತ್ತು ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ಡಬ್ಲ್ಯುಕೆಆರ್ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಗಿತ್ತು. ಈಗ ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂಬುದು ಸರ್ಕಾರದ ವಾದವಾಗಿದೆ.
ಬಿಎಂಟಿಸಿ ಬಸ್ ದರವನ್ನು ಜನವರಿ 10, 2015 ರಂದು ಹೆಚ್ಚಳ ಮಾಡಲಾಗಿತ್ತು. ಆಗ ಡೀಸೆಲ್ ಬೆಲೆ ಲೀಟರ್ಗೆ 60.90 ರೂ. ಇತ್ತು. 10 ವರ್ಷಗಳ ಹಿಂದೆ ನಾಲ್ಕು ಸಾರಿಗೆ ನಿಗಮಗಳಿಗೆ ನಿತ್ಯ 9.16 ಕೋಟಿ ರೂ. ಡೀಸೆಲ್ ಬಳಕೆಯಾಗುತ್ತಿತ್ತು. ಈಗ ಅದು 13.21 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅಗತ್ಯ ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ರಾಜ್ಯ ಸರ್ಕಾರವು 2,000 ಕೋಟಿ ರೂಪಾಯಿಯ ಎಲ್ಲಾ ಭವಿಷ್ಯ ನಿಧಿ(ಪಿಎಫ್) ಬಾಕಿಗಳನ್ನು ತೆರವುಗೊಳಿಸಿದೆ.