Wednesday, April 2, 2025
Homeರಾಜ್ಯಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿ

ಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿ

Revised milk price to come into effect tomorrow.

ಬೆಂಗಳೂರು,ಮಾ.31- ಹಾಲು ಒಕ್ಕೂಟಗಳ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿದ್ದ ತೀರ್ಮಾನದಂತೆ ನಾಳೆಯಿಂದಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್‌ 4 ರೂ. ಹೆಚ್ಚಳ ಆಗಲಿದೆ.

ಈ ಹಿಂದೆ 2023ರ ಆಗಸ್ಟ್‌ 3 ಹಾಗೂ 2024ರ ಜೂನ್‌ 2ರಲ್ಲಿ ಹಾಗೂ 2025 ಮಾರ್ಚ್‌ನಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ ಮೇಲೆ ಹೊಡೆತ ಬಿದ್ದಿದೆ.

ನೂತನ ಪರಿಷ್ಕೃತ ದರವು ಮಂಗಳವಾರ ಜಾರಿಯಾಗಲಿದ್ದು, ಜನ ಸಾಮಾನ್ಯರಿಗೆ ಹಾಲಿನ ದರ ಏರಿಕೆಯ ಬರೆ ಬೀಳಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ.ಬಸ್‌‍, ಮೆಟ್ರೋ, ವಿದ್ಯುತ್‌ ಬಳಿಕ ಕೆಎಂಎಫ್‌ ನಂದಿನಿ ಹಾಲಿನ ದರ ಏರಿಕೆ ದೊಡ್ಡ ಹೊರೆಯಾಗಿದೆ.

ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್‌ ಹಾಲಿನ ದರ 4ರೂ. ಹೆಚ್ಚಳ ಮಾಡಲಾಗಿದೆ. ರೈತರಿಗೆ ಇದರಿಂದ ಅನುಕೂಲವಾದರೂ ಗ್ರಾಹಕರಿಗೆ ಇದೊಂದು ಬರೆ ಅಂತ ಜನರು ಆಕ್ರೋಶ ಹೊರಹಾಕಿದ್ದಾರೆ.

ದರ ಪರಿಷ್ಕರಿಸುವಂತೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಕಳೆದ ಗುರುವಾರ ಒಪ್ಪಿಗೆ ನೀಡಿತ್ತು.ಹೆಚ್ಚಳ ಮಾಡಿದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡಲಾಗುತ್ತದೆ ಸದ್ಯ ರೈತರಿಗೆ ಪ್ರತಿ ಲೀಟರ್‌ ಹಾಲು ಶೇಖರಣೆಗೆ ಕೆಎಂಎಫ್‌ 31.68 ದರ ನೀಡುತ್ತಿದೆ. ಹಾಲಿನ ಮಾರಾಟ ದರ ಪರಿಷ್ಕರಣೆಯ ನಂತರ 35.68 ಸಿಗಲಿದೆ. 2024ರ ಜೂನ್‌ 26ರಂದು ಪ್ರತಿ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ 50 ಮಿಲಿಯಷ್ಟು ನೀಡಿ ದರವನ್ನು 2ರಂತೆ (42ರಿಂದ 44) ಹೆಚ್ಚಿಸಲಾಗಿತ್ತು. ಈ ಹೆಚ್ಚಳವನ್ನು ಹಿಂಪಡೆದು, ಮೊದಲಿದ್ದ ದರಕ್ಕೆ (42) 4 ಹೆಚ್ಚಿಸಲಾಗುತ್ತದೆ.

ಹಾಲು ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಕಾರಣ ಮಾರಾಟ ದರ ಹೆಚ್ಚಿಸುವಂತೆ ರೈತರು ಬಹಳ ದಿನಗಳಿಂದ ಒತ್ತಡ ಹಾಕುತ್ತಿದ್ದರು. ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚ ಪರಿಗಣಿಸಿ, ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದರ ಪರಿಷ್ಕರಿಸುವಂತೆ ಹಾಲು ಒಕ್ಕೂಟಗಳೂ ಪ್ರಸ್ತಾವ ಸಲ್ಲಿಸಿದ್ದವು.

ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಹತ್ತಿಕಾಳು ಹಿಂಡಿ, ಖನಿಜ ಪದಾರ್ಥಗಳ ಬೆಲೆ ಶೇ 35ರಿಂದ ಶೇ 40ರಷ್ಟು ಹೆಚ್ಚಳವಾಗಿದೆ. ಹೈನುರಾಸುಗಳ ನಿರ್ವಹಣಾ ವೆಚ್ಚ ಕೂಡಾ ಅಧಿಕವಾಗಿದೆ. ಹಾಲು ಒಕ್ಕೂಟದವರು 5 ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆಂದು, ಲಾಭ, ನಷ್ಟದ ಲೆಕ್ಕಾಚಾರದಲ್ಲಿ ದರ ಪರಿಷ್ಕರಿಸಿಲ್ಲ. ಹಾಲು ಉತ್ಪಾದಕರಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ.

ಜನರ ಆಕ್ರೋಶ :
ಒಂದು ಕಡೆಯಲ್ಲಿ ಗ್ಯಾರಂಟಿ ಮೂಲಕ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದರೆ ಮತ್ತೊಂದು ಕಡೆ ಬೆಲೆ ಏರಿಕೆ ಮೂಲಕ ಜನರ ಜೋಬನ್ನು ಸರ್ಕಾರ ಬರಿದು ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬಸ್‌‍ ದರ, ವಿದ್ಯುತ್‌ ದರ, ಮೆಟ್ರೋ ದರ ಹಾಗೂ ಹಾಲಿನ ದರ ಏರಿಕೆಯ ಶಾಕ್‌ ನೀಡಿದ್ದು, ಸರ್ಕಾರದ ಈ ನಿರ್ಧಾರ ಜನಾಕ್ರೋಶಕ್ಕೂ ಕಾರಣವಾಗಿದೆ.

ಪರಿಷ್ಕೃತ ನೂತನ ದರ
*ಟೋನ್ಡ್ ಹಾಲು ಒಂದು ಲೀಟರ್‌ 44 ರೂ. ಹೊಸ ದರ 48 ರೂ.
*ಹೋಮೋಜಿನೆಸ್ಡ್‌ ಟೋನ್ಡ್ ಹಾಲು ಅರ್ಧ ಲೀಟರ್‌ ಹಳೆ ದರ 24ರೂ. ಹೊಸ ದರ- 26 ರೂ.
*ಹೋಮೋಜಿನೆಸ್ಡ್‌ ಟೋನ್ಡ್ ಹಾಲು ಒಂದು ಲೀಟರ್‌ 45 ರೂ. ಹೊಸ ದರ ದರ 49 ರೂ.
*ಹೋಮೋಜಿನೆಸ್ಡ್‌ ಹಸುವಿನ ಹಾಲು ಅರ್ಧ ಲೀಟರ್‌ 26 ರೂ. ಹೊಸ ದರ 28 ರೂ.
*ಹೋಮೋಜಿನೆಸ್ಡ್‌ ಹಸುವಿನ ಹಾಲು ಒಂದು ಲೀಟರ್‌ ಹಿಂದಿನ ದರ 48 ರೂ. ಹೊಸ ದರ -52 ರೂ
*ಸ್ಪೆಷಲ್‌ ಹಾಲು ಅರ್ಧ ಲೀಟರ್‌ 27 ರೂ, ಹೊಸ ದರ 29ರೂ
*ಸ್ಪೆಷಲ್‌ ಹಾಲು ಒಂದು ಲೀಟರ್‌ 50 ರೂ, ಹೊಸ ದರ 54 ರೂ
*ಶುಭಂ ಹಾಲು ಅರ್ಧ ಲೀಟರ್‌ 27 ರೂ, ಹೊಸ ದರ 29 ರೂ.
*ಶುಭಂ ಹಾಲು ಒಂದು ಲೀಟರ್‌ 50 ರೂ, ಹೊಸ ದರ 54 ರೂ.
*ಸಮೃದ್ಧಿ ಹಾಲು ಅರ್ಧ ಲೀಟರ್‌ 28 ರೂ, ಹೊಸ ದರ 30 ರೂ.
*ಸಮೃದ್ಧಿ ಹಾಲು ಒಂದು ಲೀಟರ್‌ 56 ರೂ. ಹೊಸ ದರ 60 ರೂ.

RELATED ARTICLES

Latest News