Thursday, May 29, 2025
Homeರಾಜ್ಯBIG STORY : ಸಿವಿಲ್‌ ಪ್ರಕರಣಗಳ ಇತ್ಯರ್ಥಕ್ಕೆ ಕ್ರಾಂತಿಕಾರಕ ಹೆಜ್ಜೆ, ಸದ್ಯದಲ್ಲೇ ಅಧಿಸೂಚನೆ

BIG STORY : ಸಿವಿಲ್‌ ಪ್ರಕರಣಗಳ ಇತ್ಯರ್ಥಕ್ಕೆ ಕ್ರಾಂತಿಕಾರಕ ಹೆಜ್ಜೆ, ಸದ್ಯದಲ್ಲೇ ಅಧಿಸೂಚನೆ

Revolutionary step in the settlement of civil cases

ಬೆಂಗಳೂರು, ಮೇ 26- ಸಿವಿಲ್‌ ಪ್ರಕರಣಗಳಲ್ಲಾಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಶ್ರೀಸಾಮಾನ್ಯರಿಗೆ ನ್ಯಾಯ ಒದಗಿಸುವ ಮಹತ್ವದ ಸಿಪಿಸಿ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಒಂದೆರೆಡು ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅವರು ಅಂಕಿತ ಹಾಕದೇ ರಾಷ್ಟ್ರಪತಿಯವರಿಗೆ ರವಾನಿಸಿದ್ದರು. ಮೇ 19 ರಂದು ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಹೀಗಾಗಿ ಕಾಯ್ದೆ ಜಾರಿಗೆ ಬರಲಿದೆ. ಇನ್ನು ಮುಂದೆ ಸಿವಿಲ್‌ ಪ್ರಕರಣಗಳ ಇತ್ಯರ್ಥದಲ್ಲಿ ಕ್ರಾಂತಿಕಾರಕ ಪುರೋಗಾಮಿ ಬೆಳವಣಿಗೆಯಾಗಲಿದೆ ಎಂದರು.

ಹೊಸ ನಿಯಮಗಳ ಪ್ರಕಾರ ಸಿವಿಲ್‌ ಪ್ರಕರಣಗಳಿಗೆ ಆರಂಭದಲ್ಲಿ 2 ತಿಂಗಳ ಕಾಲ ಸಂಧಾನಕ್ಕೆ ಅವಕಾಶ ನೀಡಲಾಗುವುದು. ಅದು ಯಶಸ್ವಿಯಾಗದೇ ಅನಿವಾರ್ಯವಾಗಿ ಪ್ರಕರಣ ದಾಖಲಾದರೆ
ಆ ದಿನವೇ ಪ್ರಕರಣದ ವಿಚಾರಣೆ, ಸಾಕ್ಷ್ಯಗಳ ಹಾಜರಿ, ತೀರ್ಪು ಪ್ರಕಟಿಸುವ ದಿನಾಂಕ ಸೇರಿದಂತೆ ಎಲ್ಲದಕ್ಕೂ ವೇಳಾಪಟ್ಟಿ ನಿಗದಿಯಾಗಬೇಕು. ಪ್ರಕರಣ ಇತ್ಯರ್ಥಕ್ಕೆ ಗರಿಷ್ಠ 24 ತಿಂಗಳ ಅವಧಿ ನಿಗದಿಯಾಗಿರುತ್ತದೆ ಎಂದು ಹೇಳಿದರು.

ಒಂದು ವೇಳೆ ಪ್ರತಿವಾದಿ ಸಹಕಾರ ನೀಡದೇ ಇದ್ದರೆ ಅಂತಹ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನ್ಯಾಯಾಲಯದ ಬಲವನ್ನು ಈ ಕಾಯ್ದೆ ಹೆಚ್ಚಿಸುತ್ತದೆ. ಲಿಖಿತ ಹೇಳಿಕೆ ದಾಖಲಿಸಲು 120 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಆ ಅವಧಿಯ ಒಳಗೆ ಲಿಖಿತ ಹೇಳಿಕೆ ದಾಖಲಿಸಲು ಸಹಕರಿಸದಿದ್ದರೆ ಅನಂತರ ಬರುವ ಹೇಳಿಕೆಯನ್ನು ನಿರಾಕರಿಸುವ ಅಧಿಕಾರ ನ್ಯಾಯಾಲಯಕ್ಕಿದೆ. ಈ ಮೂಲಕ ಪ್ರಕರಣಗಳ ನಿರ್ವಹಣೆಯ ವ್ಯವಸ್ಥೆಯನ್ನು ಸಂಪೂರ್ಣ ಪುನರ್‌ ವ್ಯಾಖ್ಯಾನ ಮಾಡಲಾಗಿದೆ ಎಂದರು.

ರಾಜ್ಯದ ಕೆಳಹಂತದ ನ್ಯಾಯಾಲಯದಲ್ಲಿ 2023 ರ ವೇಳೆಗೆ 9,37,238 ಪ್ರಕರಣಗಳು ಬಾಕಿ ಇವೆ. ಒಟ್ಟಾರೆ 30.49 ಲಕ್ಷ ಸಿವಿಲ್‌ ಪ್ರಕರಣಗಳು ಬೇರೆಬೇರೆ ಹಂತದಲ್ಲಿ ಬಾಕಿ ಉಳಿದಿವೆ ಎಂದು ವಿವರಿಸಿದರು.

ಶ್ರೀಸಾಮಾನ್ಯರಿಗೆ ನ್ಯಾಯ ವಿಳಂಬದ ದ್ರೋಹವಾಗುತ್ತಿದೆ. ಇದನ್ನು ತಡೆಯುವುದು ಸರ್ಕಾರದ ಪ್ರಮುಖ ಉದ್ದೇಶ. ಹೀಗಾಗಿ ವಿಧಾನಮಂಡಲದಲ್ಲಿ ಸಿವಿಲ್‌ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ತರುವ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದಕ್ಕೆ ಶಾಸಕಾಂಗ ಸಂಪೂರ್ಣ ಸಹಕಾರ ನೀಡಿದೆ. ನ್ಯಾಯಾಂಗವೂ ಸಹಕಾರ ನೀಡಿ ಕಾಯ್ದೆಯ ಉದ್ದೇಶ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಸಿವಿಲ್‌ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಗೂ ಈ ಮಸೂದೆಯ ಜಾರಿಗೂ ಸಂಬಂಧ ಇಲ್ಲ. ನಮ ಸರ್ಕಾರ ನೂರಕ್ಕೂ ಹೆಚ್ಚು ಗ್ರಾಮ ನ್ಯಾಯಾಲಯವನ್ನು ಆರಂಭಿಸಿದೆ. 158 ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ ಎಂದು ಅವರು ವಿವರಿಸಿದರು. ಕಾಯ್ದೆಯ ಸಮರ್ಥ ಜಾರಿಯಿಂದ ಶ್ರೀಸಾಮಾನ್ಯ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸುವ ಜೊತೆಗೆ ಆರ್ಥಿಕ ಉಳಿತಾಯಕ್ಕೂ ಅನುಕೂಲವಾಗಲಿದೆ ಎಂದರು.

RELATED ARTICLES

Latest News