ಕೋಲ್ಕತ್ತಾ, ಸೆ. 14: ಮಹಿಳಾ ವೈದ್ಯೆಯ ಹತ್ಯಾಚಾರ ನಡೆದಿದ್ದ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮತ್ತೊಬ್ಬ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಮೃತಳ ಕುಟುಂಬದವರು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಜೂನಿಯರ್ ವೈದ್ಯನಾಗಿದ್ದ ಆಕೆಯ ಗೆಳೆಯನೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ 24 ವರ್ಷದ ವಿದ್ಯಾರ್ಥಿನಿ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆಕೆಯ ಕುಟುಂಬವು ಆಕೆಯ ಗೆಳೆಯ ಉಜ್ವಲ್ ಸೊರೆನ್ ವಿರುದ್ಧ ದೂರು ದಾಖಲಿಸಿದ್ದು, ಆತನೇ ಆಕೆಗೆ ವಿಷಪ್ರಾಶನ ಮಾಡಿ ನಂತರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿನ ಹಿಂದಿನ ನಿಜವಾದ ಸಂದರ್ಭಗಳು ತಿಳಿದುಬರುತ್ತವೆ ಎಂದು ಅಧಿಕಾರಿ ಹೇಳಿದರು. ದಕ್ಷಿಣ ದಿನಾಜ್‌ಪುರದ ಬಲೂರ್‌ಘಾಟ್‌ನ ನಿವಾಸಿಯಾದ ವಿದ್ಯಾರ್ಥಿನಿ, ಸಾಮಾಜಿಕ ಮಾಧ್ಯಮ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭೇಟಿಯಾದ ಉಜ್ವಲ್ ಜೊತೆ ಸಂಪರ್ಕವಿತ್ತು ಬಳಿಕ ಅದು ಪ್ರೀತಿಯಾಗಿ ಬೆಳೆದಿತ್ತು.
ಆದರೆ ಪುರುಲಿಯಾ ನಿವಾಸಿ ಉಜ್ವಲ್ ವಿದ್ಯಾರ್ಥಿನಿಯನ್ನು ಮದುವೆಯಾಗಲು ಸಿದ್ಧನಿರಲಿಲ್ಲ, ತನ್ನ ಮಗಳು ಮದುವೆಗೆ ಒತ್ತಾಯಿಸುತ್ತಿದ್ದರಿಂದ, ಇಬ್ಬರ ನಡುವೆ ನಿರಂತರವಾಗಿ ಜಗಳಗಳು ನಡೆಯುತ್ತಿತ್ತು ಎಂದು ಆಕೆಯ ತಾಯಿ ಅಲ್ಪನಾ ತುಡು ಆರೋಪಿಸಿದ್ದಾರೆ.
ನಿನ್ನೆ ಆತನಿಂದ ನಮಗೆ ಫೋನ್ ಕಾಲ್ ಬಂದಿತ್ತು, ನಿಮ್ಮ ಮಗಳು ತೀವ್ರ ಅಸ್ವಸ್ಥಳಾಗಿದ್ದು, ಮಾಲ್ಡಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಹೇಳಿದ್ದ, ಇಂದು ಆಕೆ ಮೃತಪಟ್ಟಿದ್ದಾಳೆಂದು ನಮಗೆ ತಿಳಿಸಲಾಯಿತು. ಅವಳು ಅವನನ್ನು ಮದುವೆಯಾಗುವಂತೆ ಕೇಳುತ್ತಿದ್ದಳು ಎಂಬುದು ನಮಗೆ ತಿಳಿದಿದೆ. ನಮ್ಮ ಮಗಳು ಕಳೆದ ಭಾನುವಾರ ನಮ್ಮ ಬಾಲೂರ್ಘಾಟ್ ನಿವಾಸಕ್ಕೆ ಭೇಟಿ ನೀಡಿ ಮರುದಿನ ಕೋಲ್ಕತ್ತಾಗೆ ತೆರಳಿದ್ದಳು. ನಂತರ ಅವಳು ಮಾಲ್ಡಾಕ್ಕೆ ಬಂದು ಅಸ್ವಸ್ಥಳಾದದ್ದು ಹೇಗೆ? ಪೊಲೀಸರು ಅವನನ್ನು ವಿಚಾರಣೆ ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ತಾಯಿ ಹೇಳಿದ್ದಾರೆ.
ಉಜ್ವಲ್ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು, ಆದರೆ ಮೃತರ ಶವಪರೀಕ್ಷೆಯ ವರದಿಯು ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ಸಮಯದಲ್ಲಿ ನಡೆದ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ದೇಶಾದ್ಯಂತ ಆಕ್ರೋಶ ಮತ್ತು ಕೋಲಾಹಲಕ್ಕೆ ಕಾರಣವಾಗಿತ್ತು.