Monday, February 24, 2025
Homeರಾಜ್ಯಮಹಾಕುಂಭದಿಂದ ಹಿಂದಿರುಗುವಾಗ ರಸ್ತೆ ಅಪಘಾತ, ಬೆಳಗಾವಿ ಜಿಲ್ಲೆಯ 6 ಮಂದಿ ಸಾವು

ಮಹಾಕುಂಭದಿಂದ ಹಿಂದಿರುಗುವಾಗ ರಸ್ತೆ ಅಪಘಾತ, ಬೆಳಗಾವಿ ಜಿಲ್ಲೆಯ 6 ಮಂದಿ ಸಾವು

Road accident while returning from Mahakumbh, 6 people from Belgaum district die

ಜಂಬಲ್‌ಪುರ(ಮಧ್ಯ ಪ್ರದೇಶ), ಫೆ.24– ಪ್ರಯಾಗ್‌ರಾಜ್‌ನ ಕುಂಭ ಮೇಳದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ 8 ಮಂದಿ ಪಾಲ್ಗೊಂಡು ಕ್ರೂಸರ್ ಜೀಪ್‌ನಲ್ಲಿ ಹಿಂದಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ನುಗ್ಗಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಕರ್ನಾಟಕ ನೋಂದಣಿಯ ಜೀಪ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಹಿಂತಿರುಗುತ್ತಿದ್ದಾಗ ಖಿತೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪತ್ರವಾ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ ಎಂದು ಜಂಬಲಪುರ ಜಿಲ್ಲಾಧಿಕಾರಿ ದೀಪಕ್ ಸಕ್ಷೇನಾ ತಿಳಿಸಿದ್ದಾರೆ. ಅಪಘಾತದಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ(50), ಬಸವರಾಜ ಕುರತಿ(63), ಈರಣ್ಣ ಶಬಿನಕಟ್ಟಿ (27), ಬಸವರಾಜ ದೊಡ್ಡಮನಿ(49), ವಿರೂಪಾಕ್ಷ(61) ಹಾಗೂ ಸುನೀಲ್
(45) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ 8 ಮಂದಿ ಗೋಕಾಕ್‌ನಿಂದ ಕ್ರೂಸರ್ ಜೀಪ್‌ನಲ್ಲಿ ತೆರಳಿದ್ದವರು ಉತ್ತರಪ್ರದೇಶದ ಪ್ರಯಾಗ್‌ ರಾಜ್‌ಗೆ ಹೋಗಿ ಕುಂಭಮೇಳದಲ್ಲಿ ಪಾಲ್ಗೊಂಡು ಪುಣ್ಯ ಸ್ನಾನ ಮಾಡಿ ಇವರೆಲ್ಲರೂ ಹಿಂದಿರುಗುತ್ತಿದ್ದರು. ಇಂದು ಮುಂಜಾನೆ ಜಂಬಲಪುರದ ಪೆಹಾರಾ ಟೋಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ರಸ್ತೆ ವಿಭಜಕದ ಮಧ್ಯದ ಮರಕ್ಕೆ ಡಿಕ್ಕಿ ಹೊಡೆದು, ನಂತರ ಹೆದ್ದಾರಿಯ ಇನ್ನೊಂದು ಬದಿಗೆ ಹಾರಿ ಎದುರು ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮುಸ್ತಾಕ್ ಮತ್ತು ಸದಾಶಿವ ಎಂಬುವವರು ಗಂಭೀರ ಗಾಯಗೊಂಡಿದ್ದು, ಅವರನ್ನು ಸಿಹೋರಾ ಪಟ್ಟಣದ ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಜಬಲ್‌ಪುರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ವಲ್ಪ ಸಮಯ ಬಸ್ ನಿಲ್ಲಿಸಿ ನಂತರ ಸ್ಥಳದಿಂದ ಹೊರಟುಹೋಗಿದ್ದಾನೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಮೃತರು ಬೆಳಗಾವಿ ಜಿಲ್ಲೆಯವರು ಎಂದು ತಿಳಿದು ತಕ್ಷಣ ಈ ಬಗ್ಗೆ ಕರ್ನಾಟಕದ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಭೀಕರವಾಗಿದೆ.

ಪೊಲೀಸರು ಕ್ರೇನ್ ಸಹಾಯದಿಂದ ವಾಹನವನ್ನು ಹೆದ್ದಾರಿಯಿಂದ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಆರು ಮಂದಿಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಸಂಬಂಧಿಕರ ಆಕ್ರಂದನ:
ಕುಂಭಮೇಳಕ್ಕೆ ಹೋದವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗೋಕಾಕ್‌ನಲ್ಲಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.

RELATED ARTICLES

Latest News