ಬೆಂಗಳೂರು,ಜ.1- ನಗರದಲ್ಲಿ ರಸ್ತೆ ಅಪಘಾತಗಳು ಹಾಗೂ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿದೆ.2023ರಲ್ಲಿ 4,974 ಅಪಘಾತಗಳು ಸಂಭವಿಸಿ 910 ಮಂದಿ ಮೃತಪಟ್ಟು 4,191 ಮಂದಿ ಗಾಯಗೊಂಡಿದ್ದರು. 2024 ರಲ್ಲಿ 4,784 ಅಪಘಾತಗಳು ಸಂಭವಿಸಿ 893 ಮಂದಿ ಮೃತಪಟ್ಟು 4,052 ಮಂದಿ ಗಾಯಗೊಂಡಿದ್ದಾರೆ.
ಇದನ್ನು ಗಮನಿಸಿದರೆ 2024ರ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಕೊಂಚ ಕಡಿಮೆಯಾಗಿರುವುದು ಕಂಡುಬಂದಿದೆ.ರಸ್ತೆ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನಗರ ಸಂಚಾರಿ ಪೊಲೀಸ್ ವಿಭಾಗವು ಮಾಡಿದ ನಿರಂತರ ಪ್ರಯತ್ನಗಳಿಂದಾಗಿ ಮಾರಣಾಂತಿಕ ಅಪಘಾತಗಳ ಪ್ರಮಾಣದಲ್ಲಿ ಶೇ.1.26ರಷ್ಟು ಇಳಿಮುಖವಾಗಿದೆ.
ಅಪಘಾತಗಳಿಂದ ಉಂಟಾಗುವ ಸಾವುಗಳ ಪ್ರಮಾಣ ಶೇ.1.90ರಷ್ಟು ಕಡಿಮೆಯಾಗಿರುತ್ತದೆ. ಮಾರಣಾಂತಿಕವಲ್ಲದ ಅಪಘಾತಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.4.57ರಷ್ಟು ಇಳಿಕೆ ಕಂಡಿದೆ. 2023 ಅಂಕಿಅಂಶಗಳಿಗೆ ಹೋಲಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಒಟ್ಟಾರೆ ಶೇ.3.97ರಷ್ಟು ಇಳಿಕೆ ಕಂಡುಬಂದಿದೆ.